ಸಿದ್ದರಾಮಯ್ಯ ಸಂಪುಟದ ನೂತನ ಸಚಿವರಾಗಿ ರೇವಣ್ಣ, ತಿಮ್ಮಾಪುರ, ಗೀತಾ ಪ್ರಮಾಣ

ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾದ ಎಚ್. ಎಂ ರೇವಣ್ಣ ಹಾಗೂ ಆರ್. ಬಿ ತಿಮ್ಮಾಪುರ ಮತ್ತು ಗುಂಡ್ಲುಪೇಟೆ ಶಾಸಕಿ ಗೀತಾ ಮಹಾದೇವ ಪ್ರಸಾದ್ ಅವರು ಶುಕ್ರವಾರ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಸಂಜೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ವಿ.ಆರ್ ವಾಲಾ ಅವರು ಎಚ್. ಎಂ ರೇವಣ್ಣ, ಆರ್. ಬಿ ತಿಮ್ಮಾಪುರ ಹಾಗೂ ಗೀತಾ ಮಹಾದೇವ ಪ್ರಸಾದ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ದಲಿತ ಕೋಟಾದಡಿ ಆರ್.ಬಿ. ತಿಮ್ಮಾಪುರ ಮತ್ತು ಜಾತಿಯ ಲೆಕ್ಕಾಚಾರದಲ್ಲಿ ಲಿಂಗಾಯತ ಸಮುದಾಯದ ಗೀತಾ ಮಹದೇವ ಪ್ರಸಾದ್ ಅವರಿಗೆ ಮಂತ್ರಿ ಭಾಗ್ಯ ಸಿಕ್ಕಿದೆ. ಇನ್ನು ಎಚ್. ವೈ. ಮೇಟಿಯಿಂದ ತೆರವಾದ ಸ್ಥಾನಕ್ಕೆ ಅದೇ ಕುರುಬ ಸಮುದಾಯದ ಹಾಗೂ ಮಂತ್ರಿಯ ಆಪ್ತರಲ್ಲಿ ಗುರುತಿಸಿಕೊಂಡಿದ್ದ ರೇವಣ್ಣ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗುತ್ತಿದೆ.
ಮಹದೇವಪ್ಪ ನಿಧನದಿಂದ ಒಂದು ಸ್ಥಾನ ತೆರವಾಗಿದ್ದರೆ, ಎಚ್.ವೈ.ಮೇಟಿ ಮತ್ತು ಕೆಪಿಸಿಪಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ರಾಜಿನಾಮೆಯಿಂದ ಎರಡು ಸ್ಥಾನಗಳು ತೆರವಾಗಿದ್ದವು.
Comments