ಬಿಜೆಪಿಯಲ್ಲಿ ಚುನಾವಣೆಗೆ 75 ವರ್ಷ ಮಿತಿ ಇಲ್ಲ: ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸ್ಪಷ್ಟನೆ

ಭೋಪಾಲ್: 75 ವರ್ಷ ಮೀರಿದವರು ತಮ್ಮ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸದಂತಹ ನಿಯಮವೇನೂ ಇಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, 75 ವರ್ಷ ದಾಟಿದವರು ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಯಾವುದೇ ಸಂಪ್ರದಾಯ ಅಥವಾ ನಿಯಮ ಬಿಜೆಪಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಈ ವೇಳೆ, ಇತ್ತೀಚೆಗೆ ಮಧ್ಯಪ್ರದೇಶ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ವೇಳೆ 75 ವರ್ಷ ಮೀರಿದ ಬಾಬುಲಾಲ್ ಗೌರ್ ಮತ್ತು ಸರ್ತಾಜ್ ಸಿಂಗ್ ಅವರನ್ನು ಕೈಬಿಡಲಾಗಿರುವ ಕುರಿತ ಪ್ರಶ್ನೆಗೆ, ಅದು ಮುಖ್ಯಮಂತ್ರಿಯವರ ವಿಶೇಷಾಧಿಕಾರ ಎಂದಷ್ಟೇ ಹೇಳಿ ಸುಮ್ಮನಾದರು.
ವಿಶೇಷವೆಂದರೆ ಈ ಹಿಂದೆ 75 ವರ್ಷ ದಾಟಿದ ಕಾರಣಕ್ಕಾಗಿ ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಮೊದಲಾದವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿರಲಿಲ್ಲ. ಜೊತೆಗೆ ಕೇಂದ್ರ ಸಂಪುಟದಲ್ಲಿದ ನಜ್ಮಾ ಹ್ತೆುಲ್ಲಾ ಅವರಿಗೆ 75 ವರ್ಷ ತುಂಬಿದ ತಕ್ಷಣವೇ ಅವರನ್ನು ಸಚಿವ ಪದವಿಯಿಂದ ಕೈಬಿಟ್ಟು ಬೇರೊಂದು ಹುದ್ದೆಯನ್ನು ನೀಡಲಾಗಿತ್ತು.
ಹೀಗಿರುವಾಗ ಅಮಿತ್ ಶಾ ನೀಡಿರುವ ಹೇಳಿಕೆ ಸಾಕಷ್ಟು ಅಚ್ಚರಿಕೆ ಕಾರಣವಾಗಿದೆ. ಅಮಿತ್ ಶಾ ಬಹಿರಂಗವಾಗಿ ಇಂಥ ಹೇಳಿಕೆ ನೀಡಿರುವುದು, ಹಲವು ರಾಜ್ಯಗಳಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿಗಳಾಗಿರುವ 75 ವರ್ಷ ಆಸುಪಾಸಿನ ಹಿರಿಯ ನಾಯಕರಿಗೆ ಸಾಕಷ್ಟು ಖುಷಿ ನೀಡಲಿದೆ ಎನ್ನಲಾಗಿದೆ.
Comments