ಜೆಡಿಎಸ್ ಬಂಡಾಯ ಶಾಸಕರಿಗೆ ಕಾಂಗ್ರೆಸ್ ಮಣೆಹಾಕಿದರೆ ಏನಾದೀತು?

19 Aug 2017 4:50 PM | Politics
2709 Report

ಬೆಂಗಳೂರು: ಜೆಡಿಎಸ್ ನ ಏಳು ಮಂದಿ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಸನ್ನಿಹಿತವಾಗುತ್ತಿರುವ ಬೆನ್ನಲ್ಲೇ ಮೂಲ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಹೊಗೆಯಾಡ ತೊಡಗಿದೆ. ಕಾರಣ ಟಿಕೆಟ್ ನೀಡಲೇ ಬೇಕೆಂಬ ಷರತ್ತಿನೊಂದಿಗೆ ಪಕ್ಷಕ್ಕೆ ಸೇರ್ಪಡೆಯಾದರೆ, ಇದುವರೆಗೆ ಪಕ್ಷಕ್ಕಾಗಿ ದುಡಿದ ಬಹುತೇಕ ಮುಖಂಡರು ಟಿಕೇಟ್ ವಂಚಿತರಾಗುತ್ತಾರೆ.

ಅಷ್ಟೇ ಅಲ್ಲ, ಕಾಂಗ್ರೆಸ್ ಎರಡು ಬಣವಾಗಿ ಹಂಚಿದರೂ ಅಚ್ಚರಿಯೇನಿಲ್ಲ. ಜೆಡಿಎಸ್ ಬಂಡಾಯ ಶಾಸಕರು ಪ್ರತಿನಿಧಿಸುವ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೂ ಈ ಬಂಡಾಯ ಶಾಸಕರ ಸೇರ್ಪಡೆ ಸಮಸ್ಯೆಯೇ. ಏಕೆಂದರೆ ಒಂದು ವೇಳೆ ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಗೆ ಸೇರಿ ಅವರಿಗೆ ಟಿಕೇಟ್ ಸಿಕ್ಕರೆ ಅವರ ಪರವಅಗಿ ಪ್ರಚಾರ ಮಾಡುವುದು ಅನಿವಾರ್ಯವಅಗಲಿದೆ. ಇದುವರೆಗೆ ಅವರ ವಿರುದ್ಧವೇ ತೊಡೆತಟ್ಟಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಮುಖಂಡರು ಈಗ ಅವರ ಪರವಾಗಿ ಪ್ರಚಾರ ಮಾಡುವುದು ಇರಿಸುಮುರಿಸುಂಟು ಮಾಡುವುದು ದಿಟ.

ಇದರ ಜತೆಗೆ ಟಿಕೆಟ್ ಆಕಾಂಕ್ಷೆಯಲ್ಲಿದ್ದವರಿಗೂ ನಿರಾಸೆಯಾಗಲಿದೆ. ಸದ್ಯಕ್ಕೆ ಜೆಡಿಎಸ್ ಬಂಡಾಯ ಶಾಸಕರು ಮತ್ತು ಕಾಂಗ್ರೆಸ್ ಮುಖಂಡರ ಸಭೆ ನಡೆಯುತ್ತಿದ್ದು, ಒಂದು ವೇಳೆ ಕಾಂಗ್ರೆಸ್ ನಿಂದ ಟಿಕೆಟ್ ನೀಡದೆ ಹೋದರೆ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಕಷ್ಟವೇ. ಸದ್ಯ ಜೆಡಿಎಸ್ ಬಂಡಾಯ ಮತ್ತು ಕಾಂಗ್ರೆಸ್ ನಾಯಕರ ನಡುವೆ ಗೊಂದಲವಿದ್ದು, ಅಧಿಕೃತ ಸೇರ್ಪಡೆ ಕಾರ್ಯಕ್ರಮಗಳು ಮುಂದೂಡುತ್ತಲೇ ಇರುವುದು ಕಂಡುಬರುತ್ತಿದೆ.

Courtesy: oneindia kannada

Comments