ಬಿಎಸ್'ವೈ ವಿರುದ್ಧ ಸುಳ್ಳು ಹೇಳಲು ಒತ್ತಡ?: ಎಸಿಬಿ ಅಧಿಕಾರಿಗಳ ವಿರುದ್ಧ FIR

ಬೆಂಗಳೂರು: ಶಿವರಾಮಕಾರಂತ ಬಡಾವಣೆ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್ವೈ ಹಾಗೂ ಅಧಿಕಾರಿಗಳ ವಿರುದ್ಧ ಎಫ್'ಐಆರ್ ದಾಖಲಿಸಿದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಶಿವರಾಮಕಾರಂತ ಬಡಾವಣೆ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಹಿಂದಷ್ಟೇ ಬಿಎಸ್ ವೈ ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧ ಎಸಿಬಿ ಅಧಿಕಾರಿಗಳು FIR ದಾಖಲಿಸಿತ್ತು. 2010-11ರ ಅವಧಿಯಲ್ಲಿ ಬಸವರಾಜೇಂದ್ರ ಎಂಬವರು ಭೂ ಸ್ವಾಧೀನಾಧಿಕಾರಿಯಾಗಿದ್ದರು. 14 ತಿಂಗಳು ಭೂಸ್ವಾಧೀನಾಧಿಕಾರಿಯಾಗಿದ್ದ ಬಸವರಾಜೇಂದ್ರರಿಗೆ ಸುಳ್ಳು ಹೇಳದಿದ್ದರೆ ಪ್ರಕರಣದಲ್ಲಿ ಆರೋಪಿ ಮಾಡುವ ಬೆದರಿಕೆ ಬಂದಿತ್ತೆಂಬ ವಿಚಾರ ತಿಳಿದು ಬಂದಿದೆ. ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಬರೆದ ಬಸವರಾಜೇಂದ್ರ ಎಸಿಬಿ ಡಿವೈಎಸ್ಪಿ ವಿರುದ್ಧ ದೂರು ದಾಖಲಿಸಿದ್ದಾರೆ.
ಯಡಿಯೂರಪ್ಪ ಮಾತ್ರವಲ್ಲದೆ ಬಸವರಾಜೇಂದ್ರ ವಿರುದ್ಧವೂ ಎಸಿಬಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದರು. ಈ ವಿಚಾರವಾಗಿ ಡಿವೈಎಸ್ಪಿ ಬಾಲರಾಜ್ ಮತ್ತು ಅಂಥೋಣಿಯವರು ಆ.10ರಂದು ಬಸವರಾಜೇಂದ್ರರಿಗೆ ಕರೆ ಮಾಡಿ ಬಿಎಸ್'ವೈ ವಿರುದ್ಧ ಸುಳ್ಳು ಆರೋಪ ಮಾಡುವಂತೆ ಒತ್ತಡ ಹೇರಿದ್ದರಂತೆ. ಆದರೆ ವಿಚಾರಣೆ ಸಂದರ್ಭದಲ್ಲಿ ಬಸವರಾಜೇಂದ್ರ ಎಸಿಬಿ ಅಧಿಕಾರಿಗಳಿಗೆ 'ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ನಾನು ಕೆಲಸ ನಿರ್ವಹಿಸಿದ್ದೇನೆ. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ನಾನು ಕೆಲಸ ಮಾಡಿದ್ದೇನೆ' ಎಂದಿದ್ದರು.
ಈ ಎಲ್ಲಾ ವಿಚಾರಗಳಿಂದ ಬಸವರಾಜೇಂದ್ರ ಇದೀಗ ರಾಜ್ಯ ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ
Comments