ಬಿಜೆಪಿ ಅಧಿಪತ್ಯ ಅಂತ್ಯಗೊಳಿಸಲು ಕಾಂಗ್ರೆಸ್ ಪ್ಲಾನ್: ಬೆಂಗಳೂರು 20 ಟಾರ್ಗೆಟ್
ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿಜೆಪಿ ಆಧಿಪತ್ಯವನ್ನು ಅಂತ್ಯಗೊಳಿಸಲು ನಿರ್ಧರಿಸಿರುವ ಕಾಂಗ್ರೆಸ್ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದ 28 ವಿಧಾನ ಸಭೆ ಕ್ಷೇತ್ರಗಳಲ್ಲಿ ಸುಮಾರು 20 ಸೀಟುಗಳನ್ನು ಪಡೆಯಲು ಟಾರ್ಗೆಟ್ ಇಟ್ಟುಕೊಂಡಿದೆ.
ಅಲ್ಪಸಂಖ್ಯಾತ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿರುವ ಶಿವಾಜಿನಗರ, ಶಾಂತಿನಗರ, ಹೆಬ್ಬಾಳ ಮತ್ತು ಚಾಮರಾಜಪೇಟೆ ವಿಧಾನ ಸಭೆ ಕ್ಷೇತ್ರಗಳಲ್ಲಿ ಯುವಕರಿಗೆ ಟಿಕೆಟ್ ನೀಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಸದ್ಯ ಬಿಜೆಪಿ 12, ಕಾಂಗ್ರೆಸ್ 13, ಜೆಡಿಎಸ್-3 ಶಾಸಕರಿದ್ದಾರೆ, ಜೊತೆಗೆ ಬಿಜೆಪಿ 3 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದೆ. ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲು ನಗರಕ್ಕೆ ಆಗಮಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಚರ್ಚಿಸಿದ್ದು, ಬೆಂಗಳೂರಿನಲ್ಲಿ ಹೆಚ್ಚಿನ ಸೀಟು ಪಡೆಯಲು ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಮುಂದಿನ ಚುನಾವಣೆಯಲ್ಲಿ ಚಾಮರಾಜ ಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಮೀರ್ ಅಹ್ಮದ್ ಖಾನ್ , ಪುಲಕೇಶಿ ನಗರದಿಂದ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್ ನೀಡಲು ಒಲವು ತೋರಲಾಗಿದೆ, ಜೊತೆಗೆ ಗೆಲ್ಲುವ ಸಾಮರ್ಥ್ಯವುಳ್ಳ ಸಮರ್ಥ ನಾಯಕರಿಗೆ ಬೆಂಗಳೂರು ನಗರದಲ್ಲಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರ ಪುತ್ರ ರೆಹಾನ್ ಬೇಗ್ ಗೆ ಶಿವಾಜಿ ನಗರದಿಂದ ಹಾಗೂ ರೋಶನ್ ಬೇಗ್ ಅವರಿಗೆ ಹೆಬ್ಬಾಳದಿಂದ ಟಿಕೆಟ್ ನೀಡಲು ವೇಣುಗೋಪಾಲ್ ಸಲಹೆ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ,
ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಜಯನಗರ ಕ್ಷೇತ್ರದ ಟಿಕೆಟ್ ನೀಡಿ, ಅವರ ಪುತ್ರಿಗೆ ಬಿಟಿಎಂ ಲೇಔಟ್ ನಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ, ಇನ್ನೂ ಚಿಕ್ಕಪೇಟೆ ಕ್ಷೇತ್ರಕ್ಕೆ ಆರ್ ವಿ ದೇವರಾಜ್ ಪುತ್ರನಿಗೆ ಟಿಕೆಟ್ ನೀಡಲು ವೇಣು ಗೋಪಾಲ್ ಸಲಹೆ ನೀಡಿದ್ದಾರೆ.
ಹೆಬ್ಬಾಳದಿಂದ ಸ್ಪರ್ಧಿಸಲು ಎಲ್ಲಾ ತಯಾರಿಗಳನ್ನು ನಡೆಸುತ್ತಿದ್ದ ಎಂಎಲ್ಸಿ ಭೈರತಿ ಸುರೇಶ್ ಗೆ ಯಲಹಂಕದಿಂದ ಸ್ಪರ್ಧಿಸಲು ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
Comments