ಸಿದ್ದರಾಮಯ್ಯರನ್ನು ಸೆಂಟ್ರಲ್ ಜೈಲಿಗೆ ಕಳಿಸುವುದಾಗಿ ಅಬ್ಬರಿಸಿದ ಬಿಎಸ್'ವೈ

ಬೆಂಗಳೂರು: ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಅವರನ್ನು ಮುಂದಿನ ಆರೇಳು ತಿಂಗಳಲ್ಲಿ ತನಿಖೆ ನಡೆಸಿ ಸೆಂಟ್ರಲ್ ಜೈಲಿಗೆ ಕಳಿಸದಿದ್ದರೆ ನೀವು ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸವಾಲು ಹಾಕಿದರು.
ಬಿಜೆಪಿ ರಾಜ್ಯಘಟಕ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಎಸ್'ವೈ, ಐಟಿ ದಾಳಿಗೆ ಒಳಗಾದ ಭ್ರಷ್ಟ ಸಚಿವರಾದ ಡಿ.ಕೆ ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆಯುವುದು ಈ ಪ್ರತಿಭಟನೆಯ ಉದ್ದೇಶವೆಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ಬಂದ ನಂತರ ಈ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಸಿದ್ದರಾಮಯ್ಯನವರ ಸರ್ಕಾರ ಎಂದು ಗುಡುಗಿದ ಬಿಎಸ್'ವೈ, ಲೋಕಾಯುಕ್ತವನ್ನು ಹಾಳು ಮಾಡಿ, ಸಿಐಡಿಯನ್ನು ಕ್ಲೀನ್ ಚಿಟ್ ನೀಡುವ ಡಿಪಾರ್ಟ್'ಮೆಂಟ್ ಅನ್ನಾಗಿ ಪರಿವರ್ತಿಸಿ ಭ್ರಷ್ಟಾಚಾರಿಗಳಿಗೆ, ಅಪರಾಧಿಗಳಿಗೆ ರಕ್ಷಣೆ ಕೊಡುವ ಕೆಲಸದಲ್ಲಿ ಸಿಎಂ ತೊಡಗಿದ್ದಾರೆ ಎಂದು ಲೇವಡಿ ಮಾಡಿದರು.
ಈ ಹೋರಾಟ ನಿಲ್ಲೋದಿಲ್ಲ, ಸರ್ವಾಧಿಕಾರಿ ಆಡಳಿತಕ್ಕೆ ನನ್ನ ಧಿಕ್ಕಾರ. ನನ್ನ ಮೇಲೆ 10 ವರ್ಷದ ಹಿಂದಿನ ಡಿ ನೋಟಿಫಿಕೇಶನ್ ಕೆದಕಿ ಕೇಸ್ ಹಾಕಿದ ಮಾತ್ರಕ್ಕೆ ನಾನು ಹೆದರುವುದಿಲ್ಲ. ಇಂತಹ ನೂರು ಕೇಸುಗಳನ್ನು ಹಾಕಿದರೂ ನಾನು ಹೆದರುವುದಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಅಬ್ಬರಿಸಿದರು.
Comments