ಸಿಎಂ ಸಿದ್ದರಾಮಯ ಮತ್ತು ಮಗನ ಬಂಡವಾಳ ಬಯಲು ಮಾಡುವೆ: ಯಡಿಯೂರಪ್ಪ

ಬೆಂಗಳೂರು: ನನ್ನ ವಿರುದ್ಧ ನೂರು ಕೇಸ್ ಹಾಕಿದ್ರೂ ಹೆದರಲ್ಲ. ನನ್ನ ಹೋರಾಟ ಹತ್ತಿಕ್ಕಲು ಈ ರೀತಿ ಮಾಡುತ್ತಿದ್ದಾರೆ. ಮಾನ ಮರ್ಯಾದೆ ಇದ್ದಿದ್ದರೆ ಇಂತಹ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಸೂಕ್ತ ಕಾಲದಲ್ಲಿ ಸಿಎಂ ಮತ್ತು ಅವರ ಮಗನ ಜಾತಕ ಬಯಲು ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶುಕ್ರವಾರ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಎಸ್ ಯಡಿಯೂರಪ್ಪ ವಿರುದ್ಧ ರಾಜ್ಯ ಸರ್ಕಾರ ಎಸಿಬಿಯಲ್ಲಿ ಎಫ್‌ಐಆರ್ ದಾಖಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ವಿರುದ್ಧ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ, ಅವರ ಮಗ ಹಾಗೂ ಸಚಿವರ ಜಾತಕವನ್ನೂ ನಾನು ಮುಂದೆ ಬಯಲು ಮಾಡುತ್ತೇನೆ. ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ನಂತರ ಸಿದ್ದರಾಮಯ್ಯಗೆ ನಡುಕ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಕೇಂದ್ರದ ಅನುದಾನದ ಬಗ್ಗೆ ಸಿದ್ದರಾಮಯ್ಯನವರು ಲೆಕ್ಕ ಕೊಡಲೇಬೇಕು. ಆದರೆ ಸಿದ್ದರಾಮಯ್ಯ ಶಾ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ, ಇದು ಅವರಿಗೆ ಶೋಭೆ ತರುವುದಿಲ್ಲ. ಸೂಕ್ತ ಕಾಲ ಬಂದಾಗ ಸಿಎಂ ಸಿದ್ದರಾಮಯ್ಯ ಬಂಡವಾಳ ಬಯಲು ಮಾಡುವೆ ಎಂದು ಹೇಳಿದರು.
Comments