ಸಿದ್ದರಾಮಯ್ಯ ವಿರುದ್ಧ ಎಚ್ ಡಿಕೆ, ಯಡಿಯೂರಪ್ಪ ವಾಗ್ದಾಳಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದುರಹಂಕಾರ ಹೆಚ್ಚಾಗಿದ್ದು ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯನವರು ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಜೆಡಿಎಸ್ ಪಕ್ಷವು ಕೇವಲ 2 ಅಥವಾ 3 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದ್ದಾರೆ. ಇದು ದುರಂಹಂಕಾರದ ಹೇಳಿಕೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವುದು ನಮ್ಮ ಗುರಿಯಾಗಿದ್ದು, ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ತಿಳಿಸಿದ್ದಾರೆ.
ತಮ್ಮ ವಾಗ್ದಾಳಿ ಮುಂದುವರಿಸಿದ ಅವರು, ''ಬೆಂಗಳೂರನ್ನು ಅಭಿವೃದ್ಧಿಪಡಿಸಿರುವುದಾಗಿ ಸಿದ್ದರಾಮಯ್ಯ ಭರ್ಜರಿ ಜಾಹೀರಾತು ಹಾಕುತ್ತಿದ್ದಾರೆ. ಆದರೆ, ಜೋರು ಮಳೆ ಸುರಿದ ನಂತರವಷ್ಟೇ ಬೆಂಗಳೂರಿನ ಅಸಲೀತನ ಬಯಲಿಗೆ ಬಂದಿದೆ. ಇದರಿಂದ ಕ್ರುದ್ಧರಾಗಿರುವ ಜನರು, ಮುಂದಿನ ಚುನಾವಣೆಯನ್ನು ಎದುರು ನೋಡುತ್ತಿದ್ದು ಆಗ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ'' ಎಂದು ರೇಗಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೂ ಸಿದ್ದರಾಮಯ್ಯ ಅವರನ್ನು ದುರಹಂಕಾರಿ ಎಂದು ಬಣ್ಣಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಇಂದಿರಾ ಗಾಂಧಿ ಹೆಸರಿಡಲು ನಿರ್ಧರಿಸಿರುವ ಸಿದ್ದರಾಮಯ್ಯ ಅವರಿಗೆ ದುರಹಂಕಾರ ಬಂದಿದೆ ಎಂದರು. ರಾಣಿ ಚೆನ್ನಮ್ಮ ಹೆಸರನ್ನು ಬದಲಿಸಿ ಇಂದಿರಾ ಗಾಂಧಿ ಎಂದು ಹೆಸರಿಟ್ಟರೆ ಹೋರಾಟ ಮಾಡುತ್ತೇವೆ'' ಎಂದು ಎಚ್ಚರಿಸಿದರು.
Comments