ರೈತರ ಸಾಲ ಮನ್ನಾ ಮಾಡದೆ, 15 ಮಂದಿ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ ಮೋದಿ!
ಬೆಂಗಳೂರು : ದೇಶಾದ್ಯಂತ ಜನ ಸಮಸ್ಯೆಗಳ ಸುಳಿಗೆ ಸಿಲುಕಿ ಸಾಯುತ್ತಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂದೇಶ ನೀಡುವುದರಲ್ಲಿ ಹಾಗೂ ಯುಪಿಎ ಸರ್ಕಾರದ ಕಾರ್ಯಕ್ರಮಗಳಿಗೆ ಹೊಸ ನಾಮಕರಣ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ಕಾಂಗ್ರೆಸ್ ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ಸಾರ್ಥಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯ ಸೇರಿದಂತೆ ದೇಶಾದ್ಯಂತ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಸಾಲ ಮನ್ನಾ ಮಾಡದೆ ತಪ್ಪಿಸಿಕೊಳ್ಳುತ್ತಿದೆ. ಬದಲಿಗೆ 15 ಮಂದಿ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ.
ಈ ಬಗ್ಗೆ ಪ್ರಶ್ನಿಸಬೇಕಾಗಿದ್ದ ಬಿಜೆಪಿ ಸಂಸದರಿಗೆ ಯಾವುದೇ ಸ್ವಾತಂತ್ರ್ಯವೂ ಇಲ್ಲ. ಬಿಜೆಪಿ ಎಂಪಿಗಳು ಮೋದಿ ತಿನ್ನು ಎಂದರೆ ತಿನ್ನಬೇಕು ಇಲ್ಲ ಅಂದರೆ ಇಲ್ಲ ಎಂಬಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ನಶಿಸಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ 72 ಸಾವಿರ ಕೋಟಿ ಸಾಲಮನ್ನಾ ಮನ್ನಾ ಮಾಡಿತ್ತು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 8600 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಕೇಂದ್ರ ಸರ್ಕಾರವು ಯಾವ ಕೆಲಸಗಳನ್ನೂ ಮಾಡದೆ ಕೇಂದ್ರ ಸರ್ಕಾರದ ಯೋಜನೆಗಳಿಗೆ ಹೊಸ ಹೆಸರು ಇಟ್ಟುಕೊಂಡು ಹೋಗುತ್ತಿದ್ದಾರೆ.
ಗುಜರಾತ್'ನ ನೆರೆ ಸಂತ್ರಸ್ತರ ನೋವು ಕೇಳಲು ಹೋದರೆ ರಾಹುಲ್‌ಗಾಂಧಿ ಅವರ ಮೇಲೆ ಬಿಜೆಪಿ ಗೂಂಢಾಗಳು ಕಲ್ಲು ತೂರಾಟ ಮಾಡುತ್ತಾರೆ. ಎಸ್‌ಜಿಪಿ, ಝಡ್ ಪ್ಲಸ್ ಭದ್ರತೆ ಇರುವವರೇ ಬಡವರ ಸಮಸ್ಯೆ ಕೇಳುವ ಸ್ಥಿತಿ ಇಲ್ಲದಂತಾದರೆ, ದೇಶಾದ್ಯಂತ ಆಗುತ್ತಿರುವ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲಿನ ದಬ್ಬಾಳಿಕೆ ತಡೆಯುವವರು ಯಾರು ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಕಾರ್ಯಾಧ್ಯ ದಿನೇಶ್‌ಗುಂಡೂರಾವ್ ಇದ್ದರು.
Comments