ಕೇಂದ್ರ, ಪ್ರಧಾನಿ ಮೋದಿ ಟೀಕಿಸಿದ ಪತ್ರಿಕೆ ಸಂಪಾದಕ ವಜಾ
ಚೆನ್ನೈ: ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯವರನ್ನು ಟೀಕಿಸಿದ ಅಣ್ಣಾ ಡಿಎಂಕೆ ಮುಖವಾಣಿ ಸಂಪಾದಕನನ್ನು ವಜಾ ಮಾಡಿರುವ ಘಟನೆ ನಡೆದಿದೆ.
ಎಐಎಡಿಎಂಕೆ ಪಕ್ಷದ ಮುಖವಾಣಿಯಾಗಿರುವ ನಮಾಡು ಎಂಜಿಆರ್’ನ ಸಂಪಾದಕ ಮಾರುದು ಅಲಗುರಾಜ್’ರನ್ನು ವಜಾ ಮಾಡಿರುವುದನ್ನು ಎಐಡಿಎಎಂಕೆ-ಅಮ್ಮಾ ಬಣದ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್ ಖಚಿತ ಪಡಿಸಿದ್ದಾರೆಂದು ಏಎನ್ಐ ವರದಿ ಮಾಡಿದೆ.
ಎಐಡಿಎಂಕೆ ಪಕ್ಷ ಮೂರು ಹೋಳಾಗಲು ಹಾಗೂ ಅದರ ಎರಡೆಲೆ ಚಿಹ್ನೆಯನ್ನು ತಡೆಹಿಡಿಯಲಾಗಲು ಕೇಂದ್ರ ಸರ್ಕಾರವೇ ಕಾರಣವೆಂದು ನಮಾಡು ಎಂಜಿಆರ್’ನಲ್ಲಿ ಅಲಗುರಾಜ್ ಲೇಖನವನ್ನು ಬರೆದಿದ್ದರು.
‘ಕೇಸರಿ ಬಣ್ಣ ಬಳಿಯಿರಿ, ಎಐಡಿಎಂಕೆಯನ್ನು ಮುಗಿಸಿಬಿಡಿ’ ಎಂಬ ಶೀರ್ಷಿಕೆ ಹೊಂದಿದ್ದ ಕವನವು ಮುಖವಾಣಿಯಲ್ಲಿ ಪ್ರಕಟವಾಗಿದ್ದು, ಬಿಜೆಪಿಯನ್ನು ಟೀಕಿಸಲಾಗಿತ್ತು ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಬಗ್ಗೆ ಲೇಖನ ಬರೆದಿದ್ದಕ್ಕೆ ನನ್ನನ್ನು ವಜಾ ಮಾಡಲಾಗಿದೆಯೆಂದು ಅಲಗುರಾಜ್ ಏಎನ್ಐಗೆ ತಿಳಿಸಿದ್ದಾರೆ.
ನರೇಂದ್ರ ಮೋದಿಯವರು ನನ್ನ ಪೆನ್ನನ್ನು ಕಸಿದುಕೊಂಡಿದ್ದಾರೆ, ಆದರೆ ಯಾವ ಸರ್ವಾಧಿಕಾರಿಯು ನನ್ನನ್ನು ತಡೆಯಲು ಸಾದ್ಯವಿಲ್ಲವೆಂದು ಅಲಗುರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments