ಕರ್ನಾಟಕದಲ್ಲಿ ಅವಧಿಗೆ ಮುನ್ನ ಚುನಾವಣೆ..? ಸುಳಿವು ಕೊಟ್ಟ ಷಾ
ಕರ್ನಾಟಕ ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಯುವ ಸಾಧ್ಯತೆ ಸುಳಿವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೀಡಿದ್ದಾರೆ. ಮೂರು ದಿನಗಳ ರಾಜ್ಯ ಭೇಟಿಗಾಗಿ ಆಗಮಿಸಿದ್ದ ಅವರು, ನಿನ್ನೆ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಡಿಸೆಂಬರ್ ತಿಂಗಳೊಳಗೆ ಚುನಾವಣೆ ಬಂದರೂ ಬರಬಹುದು. ನಾವೆಲ್ಲ ಸಮರೋಪಾದಿಯಲ್ಲಿ ಸಜ್ಜಾಗಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಅವಧಿಗೆ ಮುನ್ನ ಚುನಾವಣೆ ಎದುರಾದರೆ ನಾನು ಅಕ್ಟೋಬರ್‍ನಿಂದ ಇಲ್ಲೇ ಠಿಕಾಣಿ ಹೂಡುತ್ತೇನೆ. ಗುಜರಾತ್‍ನ ವಿಷಯ ನಮಗೆ ಪ್ರಮುಖವಲ್ಲ. ಕರ್ನಾಟಕದ ವಿಷಯವೇ ನಮಗೆ ಪ್ರಮುಖ. ಇಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು. ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಚುನಾವಣೆ ಬರಲಿ ಅದಕ್ಕೆ ಅಗತ್ಯ ಸಿದ್ದತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅವಧಿಪೂರ್ವ ಚುನಾವಣೆಗೆ ಇಂಬು ನೀಡುವಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಬಂಡಾಯ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲು ರಾಹುಲ್‍ಗಾಂಧಿಯವರ ಭೇಟಿಗೆ ಸಮಯ ಕೇಳಿದ್ದಾರೆ. ರಾಯಚೂರಿನಲ್ಲಿ ಕಾಂಗ್ರೆಸ್‍ನ ಬೃಹತ್ ಸಮಾವೇಶ ನಡೆಸಲಾಗಿದ್ದು, 16ಕ್ಕೆ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮೂಲಕ ಮತ್ತೊಂದು ಬೃಹತ್ ಸಮಾವೇಶ ನಡೆಯಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯದ ವಿವಿಧೆಡೆ ಭಾರೀ ಬಹಿರಂಗ ಸಭೆಗಳನ್ನು ನಡೆಸುವಂತೆ ಸೂಚನೆ ನೀಡಿದ್ದಾರೆ. ಸರ್ಕಾರದ ಕೆಲಸಗಳು ಕೂಡ ಭರದಿಂದ ಸಾಗಿವೆ. ಈ ಎಲ್ಲವನ್ನು ಗಮನಿಸಿದರೆ ಚುನಾವಣೆ ಅವಧಿಗೆ ಪೂರ್ವ ಬರಲಿದೆಯೇನೋ ಎಂಬ ಅನುಮಾನ ಮೂಡುತ್ತಿದೆ.
Comments