'ಅಮಿತ್ ಶಾ ಬಂದಿದ್ದಾರೆ ಹುಷಾರ್': ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಎಚ್ಚರಿಕೆ
ನವದೆಹಲಿ: ಸಂಸತ್ತಿನ ಎರಡೂ ಸದನಗಳತ್ತ ಸತತ ಗೈರು ಹಾಜರಾಗುತ್ತಿರುವ ಬಿಜೆಪಿ ಸಂಸದರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಮುಂದೆ ಅಮಿತ್ ಶಾ ಇಲ್ಲಿರುತ್ತಾರೆ. ನಿಮ್ಮ ರಜಾ ದಿನಗಳೆಲ್ಲಾ ಮುಗಿದವು ಎಂದು ಪ್ರಧಾನಿ ಮೋದಿಯವರು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಸಂಸತ್ತಿನಲ್ಲಿ ಹಾಜರಿರುವಂತೆ ನಿಮಗೆ ಹಲವು ಬಾರಿ ಹೇಳಿದ್ದೇವೆ. ಆದರೂ ಕೆಲವು ಸಂಸದರು ಗೈರು ಹಾಜರಾಗುತ್ತಿದ್ದೀರಿ. ನಿಮ್ಮನ್ನು ನೀವು ಎನೆಂದುಕೊಂಡಿದ್ದೀರಿ? ನೀವೂ ಏನೂ ಅಲ್ಲ, ನಾನೂ ಏನೂ ಅಲ್ಲ. ಬಿಜೆಪಿಯೊಂದೇ ಅತ್ಯಂತ ಮುಖ್ಯವಾದುದು ಎಂದು ಮೋದಿ ಹೇಳಿದ್ದಾರೆ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಹತ್ವದ ಮಸೂದೆಯೊಂದಕ್ಕೆ ತಿದ್ದುಪಡಿ ಸೂಚಿಸಿ ವಿರೋಧಪಕ್ಷಗಳ ಸೂಚಿಸಿದ್ದ ನಿರ್ಣಯವನ್ನು ಮತಕ್ಕೆ ಹಾಕಿದಾಗ, ಹಲವು ಬಿಜೆಪಿ ಸದಸ್ಯರು ಕಲಾಪಕ್ಕೆ ಗೈರು ಹಾಜರಿದ್ದರು. ಹೀಗಾಗಿ ಸರ್ಕಾರಕ್ಕೆ ಸೋಲು ಎದುರಾಗಿತ್ತು. ಇದರಿಂದ ಪಕ್ಷ ತೀವ್ರ ಮುಜುಗರ ಅನುಭವಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಮಿತ್ ಶಾ ಅವರು, ಮತ್ತೆ ಈ ರೀತಿಯ ಸಂದರ್ಭಗಳು ಮರುಕಳಿಸದಂತೆ ಸಂಸದರಿಗೆ ಎಚ್ಚರಿಕೆ ನೀಡಿದ್ದರು.
Comments