15ನೇ ಉಪರಾಷ್ಟ್ರಪತಿ ಚುನಾವಣೆ : 150 ಮತಗಳಿಂದ ವೆಂಕಯ್ಯ ಗೆಲುವು ಖಚಿತ
ದೇಶದ 15ನೇ ಉಪ ರಾಷ್ಟ್ರಪತಿ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ವೆಂಕಯ್ಯನಾಯ್ಡು ಚುನಾಯಿತರಾಗಿರುವುದು ಬಹುತೇಕ ಖಚಿತವಾಗಿದೆ. ಯುಪಿಎ ಬೆಂಬಲಿತ ಅಭ್ಯರ್ಥಿ ಮತ್ತು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರನ್ನು ನಾಯ್ಡು ಸುಮಾರು 150 ಮತಗಳಿಂದ ಪರಾಭವಗೊಳಿಸಿ ಉಪ ರಾಷ್ಟ್ರಪತಿ ಹುದ್ದೆಗೇರುವುದು ನಿಶ್ಚಿತ.
ಸಂಸತ್ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಮತದಾನ ಸಂಜೆ 5 ಗಂಟೆವರೆಗೆ ನಡೆಯಿತು. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಮಾತ್ರ ಮತದಾನ ಮಾಡಲು ಅವಕಾಶವಿದ್ದು. 790 ಸಂಸದರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ. ಸಂಜೆ 7 ಗಂಟೆಗೆ ಅಧಿಕೃತ ಫಲಿತಾಂಶ ಹೊರಬೀಳಲಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಸಹೋದ್ಯೋಗಿಗಳು, ಮಾಜಿ ಪ್ರಧಾನಿಗಳಾದ ಎಚ್.ಡಿ, ದೇವೇಗೌಡರು ಮತ್ತು ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಂಸದೀಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಅಜಾದ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮತ ಚಲಾಯಿಸಿದರು. ಉಪ ರಾಷ್ಟ್ರಪತಿ ಚುನಾವಣೆಗೆ ರಹಸ್ಯ ಮತದಾನವಾಗಿದ್ದು, ಹೀಗಾಗಿ ಯಾವುದೇ ಪಕ್ಷಗಳಿಗೆ ವಿಪ್ ನೀಡಿಲ್ಲ. ವೆಂಕಯ್ಯ ನಾಯ್ಡು ಅವರಿಗೆ 475 ಮತಗಳು ಹಾಗೂ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರೂ ಆದ ಗಾಂಧಿ ಅವರಿಗೆ 275 ಮತಗಳು ಲಭಿಸುವ ನಿರೀಕ್ಷೆ ಇದೆ.
ಎನ್‍ಡಿಎ ಲೋಕಸಭೆಯಲ್ಲಿ 338 ಮತ್ತು ರಾಜ್ಯಸಭೆಯಲ್ಲಿ 80 ಸದಸ್ಯರನ್ನು ಒಳಗೊಂಡಿದೆ. ಎನ್‍ಡಿಎಗೆ ಎಐಎಡಿಎಂಕೆ, ಟಿಆರ್‍ಎಸ್. ವೈಎಸ್‍ಆರ್-ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಈ ಪಕ್ಷಗಳು ಲೋಕಸಭೆಯಲ್ಲಿ 50 ಮತ್ತು ರಾಜ್ಯಸಭೆಯಲ್ಲಿ 17 ಸ್ಥಾನಗಳನ್ನು ಹೊಂದಿವೆ. ಲೋಕಸಭೆಯಲ್ಲಿ ಎರಡು ಮತ್ತು ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿ ಇದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರನ್ನು ಬೆಂಬಲಿಸಿದ್ದ ಬಿಜೆಡಿ ಮತ್ತು ಜೆಡಿಯು ಗಾಂಧಿ ಅವರಿಗೆ ಮತ ನೀಡಲು ಈಗಾಗಲೇ ನಿರ್ಧರಿಸಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಹಾರದಲ್ಲಿ ಮಹಾಮೈತ್ರಿಯಿಂದ ಹೊರಬಿದ್ದು, ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದೆ. ಆದರೆ, ಈ ಹಿಂದೆ ನಿರ್ಧರಿಸಿದಂತೆ ಗೋಪಾಲಕೃಷ್ಣ ಗಾಂಧಿ ಅವರಿಗೇ ಮತ ನೀಡುವುದಾಗಿ ನಿತೀಶ್ ಘೋಷಿಸಿದ್ದಾರೆ.
Comments