ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಗೆ ಹೀನಾಯ ಸೋಲು

ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಘುವೀರ್'ಗೌಡ ಆಯ್ಕೆ | ಬಿ.ಕೆ.ಶಿವರಾಂ ಪುತ್ರಗೆ 2ನೇ, ಸೌಮ್ಯರೆಡ್ಡಿಗೆ 4ನೇ ಸ್ಥಾನ
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಹಾಗೂ ವಿವಿಧ ಪದಾಧಿಕಾರಿ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ನಗರದ ಘಟಕದ ಅಧ್ಯಕ್ಷರಾಗಿ ರಘುವೀರ್‌ಗೌಡ ಗೆಲುವು ಸಾಧಿಸಿದ್ದು, ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಘೋರ ಪರಾಜಯ ಕಂಡಿದ್ದಾರೆ.
ಮೇ 14ರಿಂದ 17ರವರೆಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಘುವೀರ್ ಗೌಡ 3,890 ಮತ ಗಳಿಸುವ ಮೂಲಕ 690 ಮತಗಳ ಅಂತರದಿಂದ ಸಮೀಪ ಸ್ಪರ್ಧಿ ರಕ್ಷಿತ್ ಶಿವರಾಂ ವಿರುದ್ಧ ಜಯಗಳಿಸಿದ್ದಾರೆ.
ಕಾಂಗ್ರೆಸ್'ನ ಹಿರಿಯ ಮುಖಂಡರ ವಾರಸುದಾರರು ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ರಘುವೀರ್‌ಗೌಡ ಜಯಗಳಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ (ಬಿ.ಕೆ. ಹರಿಪ್ರಸಾದ್ ಸಹೋದರ) ಪುತ್ರ ರಕ್ಷಿತ್ ಶಿವರಾಂ 3200 ಮತ, ವಿಶ್ವನಾಥ್ 1,860 ಮತ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ 1,740 ಮತ ಗಳಿಸುವ ಮೂಲಕ ನಂತರದ ಸ್ಥಾನ ಗಳಿಸಿದ್ದಾರೆ.
ಆದರೆ, ಈ ಬಾರಿಯ ಯುವ ಕಾಂಗ್ರೆಸ್ ಚುನಾವಣೆ ತೀವ್ರ ಗೊಂದಲ ಹಾಗೂ ಮತದಾನದ ಅಕ್ರಮಗಳಿಗೆ ತುತ್ತಾಗಿದೆ ಎಂದು ಹೇಳಲಾಗುತ್ತಿದೆ. ಶನಿವಾರ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆಗೆ ಮತ ಏಣಿಕೆ ನಡೆಯಲಿದೆ
Comments