ಈ ಮನೆಮದ್ದನ್ನು ಬಳಸಿದರೆ ಕೋಮಲಯುಕ್ತ ತ್ವಚೆ ನಿಮ್ಮದಾಗೋದ್ರಲ್ಲಿ ನೋ ಡೌಟ್…!
ಸಾಮಾನ್ಯವಾಗಿ ಎಲ್ಲರಿಗೂ ಕೂಡ ತಮ್ಮ ತಮ್ಮ ಸೌಂದರ್ಯದ ಬಗ್ಗೆ ಎಲ್ಲಿಲ್ಲದ ಕಾಳಜಿ.. ಅದರಲ್ಲೂ ಹೆಣ್ಣು ಮಕ್ಕಳಂತೂ ಈ ವಿಷಯದಲ್ಲಿ ಸ್ವಲ್ಪ ಮುಂದಿರ್ತಾರೆ.. ಸೌಂದರ್ಯ ಅಂತ ಬಂದರೆ ಮೊದಲು ಬರೋದೆ ನಮ್ಮ ಚರ್ಮದ ಕಾಂತಿ. ತ್ವಚೆಯು ಕೋಮಲವಾಗಿರಬೇಕು ಅಂತ ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಲೆ ಇರುತ್ತೇವೆ. ಮನೆಯ ಹೊರಗಡೆ ಹೊರಟ ತಕ್ಷಣ ಬಿಸಿಲಿನಿಂದ ನಮ್ಮ ತ್ವಚೆಯನ್ನು ರಕ್ಷಿಸಲು ಸಾಕಷ್ಟು ರೀತಿಯ ಕ್ರೀಮ್ ಗಳನ್ನು ಬಳಸುತ್ತೇವೆ. ಚರ್ಮದ ಮೇಲೆ ಧೂಳು ಕೂರದಂತೆ ನೋಡಿಕೊಳ್ಳಲು ನಾನಾ ರೀತಿಯ ಸರ್ಕಸ್ ಗಳನ್ನು ಮಾಡುತ್ತಿರುತ್ತಾರೆ.
ತ್ವಚೆಯ ಸಂರಕ್ಷಣೆಗಾಗಿ ಒಂದಿಷ್ಟು ಮುಂಜಾಗ್ರಾತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಈ ಕೆಳಕಂಡ ಒಂದಿಷ್ಟು ಟಿಪ್ಸ್ ಗಳನ್ನು ಅನುಸರಿಸಿದರೆ ನಿಮ್ಮ ತ್ವಚೆ ಕೋಮಲ ತ್ವಚೆಯಾಗುವುದರಲ್ಲಿ ನೋ ಡೌಟ್..ನೈಸರ್ಗಿಕವಾಗಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವ ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದು ಈ ಕೆಳಕಂಡಂತಿವೆ....
ತುಳಸಿ ಎಲೆ ಬಳಸಿ
ಬಿಸಿನೀರಿಗೆ ತುಳಸಿ ಎಲೆಗಳನ್ನು ಸೇರಿಸಿ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿಡಿ. ಸುಮಾರು ಐದು ನಿಮಿಷಗಳ ಬಳಿಕ ಈ ಹಬೆಯನ್ನು ಮುಖದ ಚರ್ಮಕ್ಕೆ ಒಡ್ಡುವುದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಮೊಡವೆಗಳಿಗೆ ಕಾರಣವಾಗುವ ಧೂಳಿನ ಅಂಶವನ್ನು ಮೂಲದಿಂದಲೇ ಕಿತ್ತೆಸೆಯುತ್ತದೆ.
ಪುದೀನಾ ಹಾಗೂ ಮೊಸರು
ಪುದೀನಾ ಎಲೆಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಮೊಸರು ಸೇರಿಸಿಕೊಳ್ಳಿ. ನಂತರ ಅದನ್ನು ಫೇಸ್ ಪ್ಯಾಕ್ ರೀತಿ ಮಾಡಿಕೊಂಡು, ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳಿ, ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ ಜೊತೆಗೆ ಮುಖ ಮತ್ತಷ್ಟು ಕಾಂತಿಯುಕ್ತವಾಗುತ್ತದೆ.
ಮೊಸರು ಹಾಗು ಕಡಲೆ ಹಿಟ್ಟು ಬಳಸಿ
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಮೊಸರು ಮತ್ತು ಕಡಲೆಹಿಟ್ಟು ಇದ್ದೆ ಇರುತ್ತದೆ. ಎರಡನ್ನೂ ಒಂದೊಂದು ಚಮಚದಷ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.
ನೆನೆಸಿಟ್ಟ ಬಾದಾಮಿ
ರಾತ್ರಿಯೆಲ್ಲಾ ಬಾದಾಮಿಗಳನ್ನು ತಣ್ಣನೆಯ ನೀರಿನಲ್ಲಿ ನೆನಸಿಡಿ. ನಂತರ ಬೆಳಿಗ್ಗೆ ನುಣ್ಣಗೆ ಅರೆದು ಲೇಪನ ತಯಾರಿಸಿಕೊಳ್ಳಿ. ನಂತರ ಲೇಪನವನ್ನು ದಿನಕ್ಕೆರಡು ಬಾರಿ ತ್ವಚೆಗೆ ಹಚ್ಚುವುದರಿಂದ ನೈಸರ್ಗಿಕವಾಗಿಯೇ ನಿಮ್ಮ ತ್ವಚೆ ಕೋಮಲವಾಗುತ್ತದೆ .
ಸೌತೆ, ಲಿಂಬೆ ಮತ್ತು ಮೊಟ್ಟೆಯ ಬಿಳಿಭಾಗದ ಫೇಸ್ ಪ್ಯಾಕ್ ಉತ್ತಮ
ಒಂದು ಸೌತೆಕಾಯಿಯ ಸಿಪ್ಪೆಯನ್ನು ಸುಲಿದು ಅದರಲ್ಲಿರುವ ಬೀಜವನ್ನು ತೆಗೆದು ನುಣ್ಣಗೆ ಅರೆಯಿರಿ. ಇದಕ್ಕೆ ಸ್ವಲ್ಪ ಲಿಂಬೆಯ ರಸ ಹಾಗೂ ಮೊಟ್ಟೆಯ ಬಿಳಿಭಾಗವನ್ನುಬೇರೆ ಮಾಡಿ ಸೌರೆಕಾಯಿಯ ಮಿಶ್ರಣದ ಜೊತೆಗೆ ಬೆರೆಸಿ ನಯವಾದ ಮಿಶ್ರಣವನ್ನು ತಯಾರಿಸಿ. ಮೊದಲೆ ಬಿಸಿನೀರಿನಲ್ಲಿ ತೊಳೆದಿರುವ ಮುಖದ ಮೇಲೆ ಸಮವಾಗಿ ಮಿಶ್ರಣವನ್ನು ಹಚ್ಚಿ. ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.
ಕಡಲೆಹಿಟ್ಟು ಹಾಗೂ ತುಳಸಿಎಲೆ
ಸ್ವಲ್ಪ ಕಡಲೆಹಿಟ್ಟಿನ ಜೊತೆ ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನೀರಿನ ಬದಲು ರೋಸ್ ವಾಟರ್ ಬಳಸಿದರೆ ಲೇಪನ ಇನ್ನಷ್ಟು ಉತ್ತಮವಾಗಿರುತ್ತದೆ. ನಂತರ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದರೆ ನೈಸರ್ಗಿಕ ಕಾಂತಿ ನಿಮ್ಮದಾಗುತ್ತದೆ,
ಈ ರೀತಿಯಾಗಿ ಮಾಡುವುದರಿಂದ ಕೋಮಲ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳಿಂದ ಹೇಗೆಲ್ಲಾ ತಾರುಣ್ಯಪೂರ್ಣ ತ್ವಚೆಯನ್ನು ಪಡೆದುಕೊಳ್ಳೊದು ಅಂತ ತಿಳಿದುಕೊಂಡ್ರಿ ಅಲ್ವ. ಈ ಟಿಪ್ಸ್ ಗಳನ್ನು ನೀವು ತಿಳಿದುಕೊಂಡು ಇತರರಿಗೂ ಕೂಡ ಶೇರ್ ಮಾಡಿ.
Comments