ಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು?
ಮನೆಯಲ್ಲಿ ಅಡುಗೆ ಮಾಡಬೇಕಾದರೆ ಸಾಮಾನ್ಯವಾಗಿ ನಾವು ಒಗ್ಗರಣೆಯನ್ನು ಹಾಕುತ್ತೇವೆ. ಒಗ್ಗರಣೆಗೆ ಮುಖ್ಯವಾಗಿ ಬೇಕಾಗಿರುವು ಕರಿಬೇವು.. ಕರಿಬೇವು ಇಲ್ಲ ಅಂದ್ರೆ ಮಾಡಿದ ಅಡುಗೆಗೆ ರುಚಿಯೇ ಇರುವುದಿಲ್ಲ. ಆದರೆ ಕೆಲವರು ಕರಿಬೇವು ಎಂದರೆ ಸಾಕು ಮುಖ ಸಿಂಡರಿಸಿಕೊಳ್ಳುವವರೆ ಹೆಚ್ಚು. ಈ ಕರಿಬೇವು ಅಡಿಗೆಯಲ್ಲಿನ ರುಚಿ ಹೆಚ್ಚಿಸಲು ಮಾತ್ರವಲ್ಲ.. ನಮ್ಮ ಆರೋಗ್ಯಕ್ಕೂ ಕೂಡ ತುಂಬಾನೆ ಮುಖ್ಯ. ಹಾಗಾಗಿ ಕರಿಬೇವನ್ನು ಅಡಿಗೆಯಲ್ಲಿ ಬಳಸಿದರೆ ಅದನ್ನು ತೆಗೆದು ಹಾಕಬಾರದು. ಅದನ್ನು ತಿಂದಷ್ಟು ಅಡಿಗೆ ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
ಇನ್ನೂ ಕರಿಬೇವಿನಿಂದ ಆಗುವ ಅನುಕೂಲಗಳು ಸಾಕಷ್ಟಿವೆ.
ತಲೆ ಕೂದಲು ಬೆಳೆಯಲು ಸಹಾಯ ಮಾಡುತ್ತದೆ
ದೇಹದಲ್ಲಿರುವ ಪೋಷಕಾಂಶಗಳ ಕೊರತೆಯಿಂದಾಗಿ ಬಹುಬೇಗ ತಲೆ ಕೂದಲು ಬಿಳಿಯಾಗುವುದು ಹಾಗೂ ಉದುರುವುದು ಇತ್ತಿಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಕರಿಬೇವು ಸೊಪ್ಪಿನಿಂದ ಬಿಳಿ ಕೂದಲು ಆಗುವುದನ್ನು ತಡೆಗಟ್ಟುವುದರೊಂದಿಗೆ ಕೂದಲು ಬೆಳವಣಿಗೆಗೂ ಕೂಡ ಸಹಾಯಕಾರಿಯಾಗಿದೆ.
ಮಧುಮೇಹವನ್ನು ನಿವಾರಿಸುವಲ್ಲಿ ಸಹಾಯಕ
ಮಧುಮೇಹಿಗಳಿಗೆ ಕರಿಬೇವು ತುಂಬಾನೇ ಒಳ್ಳೆಯದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಪ್ರಮಾಣ ನಮ್ಮ ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹವನ್ನು ಯಾವಾಗಲೂ ನಿಯಂತ್ರಣದಲ್ಲಿರಿಸುತ್ತದೆ. ಮಧುಮೇಹಿಗಳು ಕರಿಬೇವನ್ನು ಹೆಚ್ಚಾಗಿ ತಿನ್ನುವುದು ಅವಶ್ಯಕ. ಪ್ರತಿದಿನ ಕರಿಬೇವಿನ ಎಲೆಗಳನ್ನು ಆಹಾರದ ಮೂಲಕ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಜೀರ್ಣಕ್ರಿಯೆಗೆ ಸರಿಯಾಗಿ ಆಗುವಂತೆ ಮಾಡುತ್ತದೆ.
ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ಅಂಶ ಇರುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮತ್ತು ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರ ಹಾಕಲು ನೆರವಾಗುತ್ತದೆ
ರಕ್ತಹೀನತೆಯನ್ನು ಹೋಗಲಾಡಿಸಲು ನೆರವಾಗುತ್ತದೆ.
ಕರಿಬೇವಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸಿ ರಕ್ತದ ಹರಿವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.ಅಷ್ಟೆ ಅಲ್ಲದೇ ಕರಿಬೇವು ಕೊಲೆಸ್ಟ್ರಾಲ್ ಕಡಿಮೆ ಮಾಡುವುದರೊಂದಿಗೆ ಚರ್ಮದ ಕಾಂತಿಗೂ ಇದು ಸಹಾಯಕಾರಿಯಾಗಿದೆ.
ಮೂತ್ರಪಿಂಡಗಳ ಕ್ಷಮತೆಗೂ ಒಳ್ಳೆಯದು ಈ ಕರಿಬೇವು
ಇಂದಿನ ದಿನಗಳಲ್ಲಿ ನಾವು ರೆಡಿಮೆಡ್ ಆಹಾರಗಳ ಕಡೆ ಮುಖ ಮಾಡುತ್ತಿದ್ದೇವೆ. ಇದರಿಂದ ನಮ್ಮ ಜೀವನ ಶೈಲಿ ಕೂಡ ಬದಲಾಗುತ್ತಿದೆ.ಆರೋಗ್ಯದಲ್ಲಿ ಏರು ಪೇರಾಗುತ್ತದೆ. ಇದರಿಂದ ನಮ್ಮ ಮೂತ್ರ ಪಿಂಡಗಳಿಗೆ ತೊಂದರೆಯಾಗುತ್ತದೆ. ಇದಕ್ಕೆ ರಾಮಬಾಣ ಅಂದರೆ ಕರಿಬೇವು ಪ್ರತಿದಿನ ನಮ್ಮ ಆಹಾರದಲ್ಲಿ ಕರಿಬೇರು ಇರುವಂತೆ ನೋಡಿಕೊಳ್ಳವುದರಿಂದ ನಮ್ಮ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ನೋಡಿಕೊಳ್ಳಬಹುದು.
ಕರಿಬೇವು ಎದೆಯುರಿಯನ್ನು ಶಮನಗೊಳಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಕೆಲವೊಮ್ಮೆ ಹೊಟ್ಟೆಯಲ್ಲಿ ಅಜೀರ್ಣವಾದ ಕಾರಣ ಹಲವು ಅನಿಲಗಳು ಉತ್ಪತ್ತಿಯಾಗಿ ಹೊಟ್ಟೆ ಮತ್ತು ಎದೆಯಲ್ಲಿ ಹೆಚ್ಚು ಉರಿ ಕಾಣಿಸಿಕೊಳ್ಳುತ್ತದೆ. ಹುಳಿತೇಗು, ವಾಂತಿ ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ. ಈ ಸಮಯದಲ್ಲಿ ಕರಿಬೇವುಗಳನ್ನು ಮಿಕ್ಸಿಯಲ್ಲಿ ರುಬ್ಬಿ ತಯಾರಿಸಿದ ಒಂದು ಲೋಟ ಜ್ಯೂಸ್ ಕುಡಿದರೆ ಸಾಕು ತಕ್ಷಣ ಎದೆ ಉರಿ ಕಡಿಮೆಗೊಳ್ಳುತ್ತದೆ. ಅಜೀರ್ಣವಾಗಿದ್ದ ಆಹಾರ ಜೀರ್ಣವಾಗಿ ಪಚನಕ್ರಿಯೆ ಸರಾಗವಾಗುವಂತೆ ಮಾಡುತ್ತದೆ..
ವಾಕರಿಕೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ
ಸಾಮಾನ್ಯವಾಗಿ ಗರ್ಭಿಣಿಯರಿಗೆ ಆರಂಭದ ತಿಂಗಳುಗಳಲ್ಲಿ ವಾಂತಿಯಾಗುವುದು ಸರ್ವೆ ಸಾಮಾನ್ಯ. ತಿಂದ ಆಹಾರವೆಲ್ಲಾ ವಾಂತಿಯ ಮೂಲಕ ಹೊರಬಂದು ಬಿಡುತ್ತದೆ. ಹಾಗಾಗಿ ಇದಕ್ಕೆ ಕರಿಬೇವಿನ ಎಲೆಗಳನ್ನು ಅರೆದು ತಯಾರಿಸಿದ ಮಿಶ್ರಣವನ್ನು ನೀರಿನಲ್ಲಿ ಸೇರಿಸಿ ಕುಡಿಯುವ. ವಾಕರಿಕೆ, ವಾಂತಿಯ ತೊಂದರೆ ನಿವಾರಣೆಯಾಗುತ್ತದೆ.
ಆಯುರ್ವೇದದಲ್ಲೂ ಕೂಡ ಕರಿಬೇವಿನ ಉಲ್ಲೇಖವಿದ್ದು ಇದು ದೇಹದಲ್ಲಿರುವ ಪಿತ್ತದ ಅಂಶವನ್ನು ಸಹ ಶಮನಗೊಳಿಸುತ್ತದೆ.ಬಹಳ ವರ್ಷಗಳಿಂದಲೂ ಕೂಡ ಕರಿಬೇವು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬಂದಿದೆ. ಹಿಂದಿನ ಕಾಲದಲ್ಲಿ ಇದರ ಬಳಕೆ ಸಾಕಷ್ಟು ಇತ್ತು. ಕರಿಬೇವನ್ನು ಒಂದು ಆಯುರ್ವೇದ ಔಷಧಿಯಾಗಿ ಬಳಸುತ್ತಿದ್ದರು. ಇದನ್ನು ತಿಂದರೆ ಕಣ್ಣಿಗೂ ಕೂಡ ತುಂಬಾ ಒಳ್ಳೆಯದು. ದೃಷ್ಟಿದೋಷಗಳು ನಿವಾರಣೆಯಾಗುತ್ತವೆ. ಹಾಗಾಗಿ ಇನ್ನೂ ಮುಂದೆ ಯಾರು ಯಾರು ಕರಿಬೇವನ್ನು ತಿನ್ನಿವುದಿಲ್ಲವೋ ಅವರೆಲ್ಲರೂ ಕರಿಬೇವನ್ನು ತಿಂದು ಸಾಕಷ್ಟು ಪ್ರಯೋಜನಗಳನ್ನು ಪಡೆದು ನಿಮ್ಮ ದೇಹದ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಿ.
Comments