ಹಾಲು ಉತ್ಪಾದಕರಿಗೆ ಬಿಗ್ ಶಾಕ್ : ಹಾಲಿನ ದರದಲ್ಲಿ 2 ರೂ. ಕಡಿತ
ಕೊರೋನಾ ಸಂಕಷ್ಟದ ಸಮಯದಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗೂ ದಿನ ಬಳಕೆ ವಸ್ತುಗಳ ನಿರಂತರ ಏರಿಕೆಯಿಂದ ಸಂಕಷ್ಟದಲ್ಲಿರುವ ಜಿಲ್ಲೆಯ ಹೈನುಗಾರಿಕೆ ರೈತರಿಗೆ ಜಿಲ್ಲಾ ಹಾಲು ಒಕ್ಕೂಟ ಲೀಟರ್ ಹಾಲಿಗೆ 2 ರೂಪಾಯಿ ಇಳಿಕೆ ಮಾಡಿದ್ದು, ಈ ತೀರ್ಮಾನದಿಂದ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಮೊದಲು 26.90 ರೂ ಇದ್ದ ದರದಲ್ಲಿ ಇದೀಗ 2 ರೂ ಕಡಿತ ಮಾಡಿ 24.90 ರೂ ನೀಡಲು ನಿರ್ಣಯ ಮಾಡಿದೆ. ಈ ಆದೇಶ ಮಂಡ್ಯ ಜಿಲ್ಲೆಯಲ್ಲಿ ಹೈನುಗಾರಿಕೆ ಮಾಡುವ ರೈತರ ಬದುಕಿಗೆ ಬರೆ ಎಳೆದಂತಾಗಿದೆ. ಆದ್ರೆ ಮನ್‌ಮುಲ್ ಆಡಳಿತ ಮಂಡಳಿಯವರು ನಮ್ಮಲ್ಲಿ ಹಾಲು ಮಾರಾಟ ಆಗ್ತಿಲ್ಲ. ಹೀಗಾಗಿ ನಷ್ಟವಾಗ್ತಿದೆ ಎಂದು ಕಾರಣ ನೀಡ್ತಿದ್ದಾರೆ. ಇದೇ ಕಾರಣಕ್ಕೆ ರೈತರಿಂದ ಕೊಳ್ಳುವ ಹಾಲಿಗೆ ಲೀಟರ್‌ಗೆ 2 ರೂ. ದರ ಕಡಿತ ಮಾಡಿದ್ದೇವೆಂದು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ರೈತರು ಸಹಕರಿಸಬೇಕು ಎನ್ನುತ್ತಿದ್ದಾರೆ.
ಇನ್ನು ಜಿಲ್ಲೆಯ ರೈತ ಸಂಘಟನೆಗಳು ಕೂಡ ಹಾಲಿನ ದರ ಕಡಿಮೆ ಮಾಡಿರೋದಕ್ಕೆ ಆಕ್ರೋಶ ಹೊರ ಹಾಕಿವೆ. ಸರ್ಕಾರ ಪೆಟ್ರೋಲ್, ಡೀಸೆಲ್ ಗಳ ಮೇಲೆ ತಮಗೆ ಬೇಕಾದಷ್ಟು ತೆರೆಗೆ ಹಾಕಿ ಜನರಿಂದ ಹಣ ಸುಲಿಗೆ ಮಾಡುತ್ತವೆ. ಅಂತಾದ್ದರಲ್ಲಿ ಹೀಗೆ ರೈತರ ಉತ್ಪನ್ನಗಳಿಗೆ ಮಾತ್ರ ದರ ಕಡಿತ ಮಾಡಿ, ರೈತರನ್ನ ಸಾಲದ ಸುಳಿಗೆ ಸಿಲುಕಿಸುತ್ತಿವೆ. ಇದರ ವಿರುದ್ದ ಉಗ್ರ ಹೋರಾಟ ಮಾಡ್ತಿವಿ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡ್ತಿವೆ.
Comments