ಪುನೀತ್ ನಿಧನಕ್ಕೆ ಕಂಬನಿ ಮಿಡಿದ ಭಾರತೀಯ ಸಿನಿತಾರೆಯರು
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಇಡೀ ಚಂದನವನ ಸ್ತಬ್ದವಾಗಿದೆ. ಇದು ಕೇವಲ ಕನ್ನಡ ಚಿತ್ರಕ್ಕೆ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಎಂದು ಪರಭಾಷಾ ಸ್ಟಾರ್ಗಳು ಟ್ವೀಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನ ನನಗೆ ಆಘಾತ ಉಂಟು ಮಾಡಿದೆ ಎಂದು ಅಮಿತಾಬ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.
ಡಾ. ರಾಜ್‍ಕುಮಾರ್ ಕುಟುಂಬದೊಂದಿಗೆ ಅಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿರುವ ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಪುನೀತ್ ಇಷ್ಟು ಬೇಗ ಹೋಗಿದ್ದು, ಆಘಾತಕಾರಿ, ಅರಗಿಸಿಕೊಳ್ಳಲು ಆಗದಂತಹ ಮತ್ತು ಹೃದಯ ವಿದ್ರಾವಕ ಸುದ್ದಿಯಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ನನ್ನ ಸಂತಾಪ. ಒಟ್ಟಾರೆಯಾಗಿ ಕನ್ನಡ/ಭಾರತೀಯ ಚಲನಚಿತ್ರ ಬಂಧುಗಳಿಗೆ ಇದು ಒಂದು ದೊಡ್ಡ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿ ಎಲ್ಲರಿಗೂ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ಪುನೀತ್‍ಗೆ ಬಹಳ ಅಚ್ಚುಮೆಚ್ಚಿನ ಗೆಳೆಯರಾಗಿದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಳ್ಳುವುದರ ಜೊತೆಗೆ, ಸಂಪೂರ್ಣವಾಗಿ ಶಾಕ್ ಆಗಿದೆ. ಪದಗಳಲ್ಲಿ ನಷ್ಟವನ್ನು ಹೇಳಲಾಗುವುದಿಲ್ಲ. ನನ್ನ ಬಹುಕಾಲದ ಗೆಳೆಯ ಪುನೀತ್ ಇನ್ನಿಲ್ಲ. ನಾವು ಪರಸ್ಪರ ಗೌರವ ಮತ್ತು ಪ್ರೀತಿ ಹೊಂದಿದ್ದೇವೆ. ಈಗಲೂ ನಂಬಲು ಆಗುತ್ತಿಲ್ಲ. ಅವರ ವಿನಮ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ಹಲವಾರು ಸಮಾರಂಭಗಳಲ್ಲಿ ಪುನೀತ್ ಅವರ ಡ್ಯಾನ್ಸ್ ಎಂದರೆ ನನಗೆ ಬಹಳ ಇಷ್ಟ ಎಂದು ಅಲ್ಲು ಅರ್ಜುನ್ ಹೇಳಿದ್ದರು.
Comments