ಇಎಂಐ ಪಾವತಿಗೆ ಮೂರು ತಿಂಗಳ ವಿನಾಯಿತಿ: ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಹಲವು ಕ್ರಮಗಳನ್ನು ಪ್ರಕಟಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಮತ್ತೆ ಸಾಲದ ಮೇಲೆ ಇಎಂಐ ಪಾವತಿದಾರರಿಗೆ ಕೊಂಚ ನಿಟ್ಟುಸಿರು ಬಿಡುವ ಸಿಹಿ ಸುದ್ದಿ ನೀಡಿದೆ.
ಸಾಲದ ಮೇಲಿನ ಕಂತು ಪಾವತಿ ದಿನಾಂಕವನ್ನು ಜೂನ್.1ರಿಂದ ಆಗಸ್ಟ್.30ರವರೆಗೂ ವಿಸ್ತರಣೆ ಮಾಡಲಾಗಿದೆ. ಗೃಹಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲದ ಕಂತು ಪಾವತಿ ದಿನಾಂಕವನ್ನು ವಿಸ್ತರಿಸಲಾಗಿದೆ. ಮುಂದಿನ ಮೂರು ತಿಂಗಳವರೆಗೂ ಎಲ್ಲ ರೀತಿಯ ಸಾಲಗಳ ಇಎಂಐ ಕಟ್ಟುವಂತಿಲ್ಲ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಇದರ ಜೊತೆಗೆ ಕ್ರಿಡಿಟ್ ಕಾರ್ಡ್ ಸಾಲಕ್ಕೂ ಇಎಂಐ ವಿನಾಯಿತಿಯನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್, ರೆಪೋ ಮತ್ತು ರಿವರ್ಸ್ ರೆಪೋ ದರ ಇಳಿಕೆ ಮಾಡಿದ್ದಾರೆ. ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿದೆ. ಶೇ. 4.4ರಷ್ಟಿದ್ದ ರೆಪೋ ದರ ಶೇ. 4ಕ್ಕೆ ಇಳಿಕೆಯಾಗಿದೆ. ರಿವರ್ಸ್ ರಿಪೋ ದರವನ್ನೂ ಕೂಡ ಶೇ. 3.35ಕ್ಕೆ ಇಳಿಸಲಾಗಿದೆ.
Comments