ಅಮೆರಿಕದ ಸಿಲ್ವರ್ ಲೇಕ್ ಕಂಪೆನಿ ಜಿಯೊ ದಲ್ಲಿ ಹೂಡಿಕೆ

ಫೇಸ್ಬುಕ್ ಸಂಸ್ಥೆ ರಿಲಾಯನ್ಸ್ ಜಿಯೋದಲ್ಲಿ ಬಂಡವಾಳ ಹೂಡಿದ್ದು ದೊಡ್ಡ ಸುದ್ದಿಯಾಗಿತ್ತು. ಜಿಯೋವನ್ನು ಇನ್ನಷ್ಟು ಬಲಿಷ್ಠಗೊಳಿಸಿತ್ತು. ಈಗ ಅಮೆರಿಕದ ಮತ್ತೊಂದು ಬೃಹತ್ ಕಂಪನಿ ಸಿಲ್ವರ್ ಲೇಕ್ ಕೂಡ ಜಿಯೋದಲ್ಲಿ ಹೂಡಿಕೆ ಮಾಡಿದೆ. ಖಾಸಗಿ ಹೂಡಿಕೆ ನಿರ್ವಹಣಾ ಕಂಪನಿಯಾದ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1ರಷ್ಟು ಪಾಲನ್ನು ಖರೀದಿಸಿದೆ. ಇದು ಸುಮಾರು 750 ಮಿಲಿಯನ್ ಡಾಲರ್, ಅಂದರೆ ಸುಮಾರು 5,655.75 ಕೋಟಿ ರೂ ಮೊತ್ತವಾಗುತ್ತದೆ. ಈ ಒಪ್ಪಂದದಿಂದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಇನ್ನಷ್ಟು ಶ್ರೀಮಂತವಾಗಲಿದೆ. ಆರ್ಐಎಲ್ ಮೌಲ್ಯ ಸುಮಾರು 65 ಬಿಲಿಯನ್ ಡಾಲರ್ನಷ್ಟಾಗಿದೆ.
ಸಿಲ್ವರ್ ಲೇಕ್ ಕಂಪೆನಿಯ ಹೂಡಿಕೆ ಬಗ್ಗೆ ಮಾಹಿತಿ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ, ಭಾರತದ ಡಿಜಿಟಲ್ ಕ್ಷೇತ್ರದ ಬೆಳವಣಿಗೆಗೆ ನಮ್ಮ ಸಹಭಾಗಿಯಾಗಿ ಸಿಲ್ವರ್ ಲೇಕ್ ಕಂಪೆನಿ ಕೈಜೋಡಿಸುತ್ತಿರುವುದು ಸಂತಸ ತಂದಿದೆ.ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕಂಪೆನಿ ಸಿಲ್ವರ್ ಲೇಕ್ ಹಣಕಾಸು ಮತ್ತು ತಂತ್ರಜ್ಞಾನ ವಿಷಯದಲ್ಲಿ ಗುರುತಿಸಿಕೊಂಡಿದೆ. ಆ ಕಂಪೆನಿಯ ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ಭಾರತದ ಡಿಜಿಟಲ್ ಲೋಕದ ಸುಧಾರಣೆ ಮತ್ತು ರೂಪಾಂತರಕ್ಕೆ ಪ್ರಯತ್ನಿಸಲಾಗುವುದು ಎಂದರು.
ಲಾಕ್ಡೌನ್ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಬೆಳವಣಿಗೆಗಳಾಗುತ್ತಿರುವುದು ಗಮನಾರ್ಹ. ಭಾರತದಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುವ ಅಗತ್ಯವಿದೆ. ದೇಶದ ಮೂಲೆ ಮೂಲೆಯಲ್ಲೂ ಡಿಜಿಟಲ್ ವ್ಯವಸ್ಥೆ ಸಮರ್ಪಕವಾಗಿ ಅಳವಡಿಕೆಯಾಗಬೇಕಿದೆ. ಈ ದೃಷ್ಟಿಯಿಂದ ಜಿಯೋದಲ್ಲಿ ವಿದೇಶೀ ಸಂಸ್ಥೆಗಳು ಹೂಡಿಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ ತಜ್ಱರು.
Comments