ಕೇಂದ್ರ ಕ್ರೀಡಾ ಸಚಿವರ ಕಣ್ಣಿಗೆ ಬಿದ್ದ ಕಂಬಳ ಓಟಗಾರ: ಉಸೇನ್ ಬೋಲ್ಟ್ಗಿಂತಲೂ ವೇಗವಾಗಿ ಓಡುವ ಈತನಿಗೆ ಸಿಗುತ್ತಾ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅವಕಾಶ?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉಸೇನ್ ಬೋಲ್ಟ್ಗಿಂತ ವೇಗವಾಗಿ ಕೆಸರು ಗದ್ದೆಯಲ್ಲಿ ಓಡಿದ ವ್ಯಕ್ತಿಯೊಬ್ಬನ ಫೋಟೋ ವೈರಲ್ ಆಗಿತ್ತು. ಆ ಸುದ್ದಿ ಇದೀಗ ಕ್ರೀಡಾ ಸಚಿವಾಲಯದ ರಾಜ್ಯ ಸಚಿವರವರೆಗೆ ತಲುಪಿದ್ದು, ಆ ವ್ಯಕ್ತಿಯನ್ನು ತಾನು ಭೇಟಿ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಪ್ರಸಿದ್ಧ ಜಾನಪದ ಕ್ರೀಡೆಯಾಗಿರುವ ಕಂಬಳದಲ್ಲಿ ಶ್ರೀನಿವಾಸ್ ಗೌಡ ಹೆಸರಿನ ವ್ಯಕ್ತಿ ಓಡಿದ್ದು ಹೊಸ ದಾಖಲೆಯೊಂದನ್ನು ಬರೆದಿತ್ತು. 142 ಮೀಟರ್ ಅಂತರವನ್ನು ಶ್ರೀನಿವಾಸ್ ಕೇವಲ 13.42 ಸೆಕೆಂಡ್ಗಳಲ್ಲಿ ಓಡಿದ್ದರು. 100 ಮೀಟರ್ ಓಟಕ್ಕೆ ಇವರು ತೆಗೆದುಕೊಂಡ ಸಮಯ ಕೇವಲ 9.55 ಸೆಕೆಂಡ್. ಕರ್ನಾಟಕದಲ್ಲಿ ಮಾತ್ರವೇ ಇರುವ ಕಂಬಳ ಕ್ರೀಡೆಯಲ್ಲಿ ಇದು ದಾಖಲೆಯಾಗುವುದರ ಜತೆ ವಿಶ್ವ ಮಟ್ಟದಲ್ಲಿಯೂ ದಾಖಲೆ ಬರೆದಂತಾಗಿತ್ತು. ವಿಶ್ವದ ಅತ್ಯಂತ ವೇಗದ ಓಟಗಾರ ಎಂದು ಕರೆಸಿಕೊಂಡಿರುವ ಉಸೇನ್ ಬೋಲ್ಟ್ 100 ಮೀಟರ್ ಓಡಲು 9.58 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತಾರೆ. ಇದೀಗ ಬೋಲ್ಟ್ನ ದಾಖಲೆಯನ್ನು 28 ವರ್ಷದ ಶ್ರೀನಿವಾಸ್ ಮುರಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶ್ರೀನಿವಾಸ್ನ ಈ ದಾಖಲೆಯ ಕುರಿತಾಗಿ ಜನ ಮಾತನಾಡಿಕೊಳ್ಳುತ್ತಿರುವಾಗಲೇ ಈ ಸುದ್ದಿ ಕೇಂದ್ರದವರೆಗೂ ಹೋಗಿ ತಲುಪಿದೆ. ಕೇಂದ್ರ ಕ್ರೀಡಾ ಸಚಿವಾಲಯದ ರಾಜ್ಯ ಸಚಿವ ಕಿರೆನ್ ರಿಜಿಜು ಅವರಿಗೆ ಈ ವಿಷಯ ತಿಳಿದುಬಂದಿದೆ. ಶ್ರೀನಿವಾಸ್ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಕಿರೆನ್, ಶ್ರೀನಿವಾಸರನ್ನು ತಾವು ದೆಹಲಿಗೆ ಕರೆಸಿಕೊಳ್ಳುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರ ಎದುರಿಗೆ ಶ್ರೀನಿವಾಸ್ನ ಓಟದ ವೇಗವನ್ನು ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.
ಶ್ರೀನಿವಾಸ್ರನ್ನು ಒಲಿಂಪಿಕ್ಸ್ಗೆ ಕಳುಹಿಸಬೇಕು ಎಂದು ಸಾಮಾಜಿಕ ಜಾಲತಾಣಗಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಮಾತನಾಡಿರುವ ಸಚಿವರು, “ನಮ್ಮ ಜನರಿಗೆ ಒಲಿಂಪಿಕ್ಸ್ನ ನೀತಿ ನಿಯಮಗಳು ಸರಿಯಾಗಿ ತಿಳಿದಿಲ್ಲ. ಒಲಿಂಪಿಕ್ಸ್ನಲ್ಲಿ ಅಂತಿಮವಾಗಿ ಮನುಷ್ಯನ ಶಕ್ತಿ ಮತ್ತು ಸಾಮರ್ಥ್ಯವೇ ಗೆಲ್ಲುತ್ತದೆ. ಭಾರತದ ಯಾವುದೇ ಪ್ರತಿಭೆಯು ಅವಕಾಶದಿಂದ ವಂಚಿತರಾಗಲು ನಾವು ಬಿಡುವುದಿಲ್ಲ” ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಉಸೇನ್ ಬೋಲ್ಟ್ಗೆ ಹೋಲಿಕೆ ಮಾಡುತ್ತಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ಶ್ರೀನಿವಾಸ್, “ಜನರು ನನ್ನನ್ನು ಉಸೇನ್ ಬೋಲ್ಟ್ಗೆ ಹೋಲಿಸುತ್ತಿದ್ದಾರೆ. ಆತ ಅಂತಾರಾಷ್ಟ್ರೀಯ ಕ್ರೀಡಾಪಟು. ನಾನು ಸಾಮಾನ್ಯ ಮನುಷ್ಯ. ಅವರೆಲ್ಲಿ ನಾನೆಲ್ಲಿ” ಎಂದು ಹೇಳಿದ್ದಾರೆ.
ಕಳೆದ ವರ್ಷ ಮಧ್ಯಪ್ರದೇಶದ ಒಬ್ಬ ವ್ಯಕ್ತಿಯು 11 ಸೆಕೆಂಡುಗಳಲ್ಲಿ 100 ಮೀಟರ್ ಓಡುತ್ತಾನೆ ಎನ್ನುವುದು ಸುದ್ದಿಯಾಗಿದ್ದಾಗಲೂ ಸಹ ಕಿರೆನ್ ಆತನನ್ನು ಭೇಟಿಯಾಗಿದ್ದರು. (ಏಜೆನ್ಸೀಸ್)
Comments