‘’ಓಪನ್ ಆಗಿ ಹೇಳ್ತಿದ್ದೀವಿ ನಾವಂತೂ ನಿಖಿಲ್ ಗೆ ಸಪೋರ್ಟ್ ಮಾಡುವುದಿಲ್ಲ, ಏನ್ ಬೇಕಿದ್ರು ಮಾಡ್ಕೊಳ್ಳಿ’’ : ಹೇಳಿದ್ಯಾರು..?!!!
ಚುನಾವಣೆ ಬಿಸಿ ಏರುತ್ತಿದ್ದಂತೇ ಅಭ್ಯರ್ಥಿಗಳ ಪರಸ್ಪರ ಹಣಾಹಣಿ ಜೋರಾಗುತ್ತಿದೆ.ಈಗಾಗಲೇ ಮಂಡ್ಯದ ಕೆಲವು ಹಳ್ಳಿಗಳಲ್ಲಿ ಕಾರ್ಯಕರ್ತರ ನಡುವೆ ಜಗಳ –ಹಲ್ಲೆ ತಾರಕಕ್ಕೇರುತ್ತಿದೆ. ಒಂದು ಕಡೆ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದಾರೆ. ದೋಸ್ತಿ ಸರ್ಕಾರದ ಅಭ್ಯರ್ಥಿಯಾಗಿ ನಿಂತಿರುವ ನಿಖಿಲ್ ಕುಮಾರ ಸ್ವಾಮಿಗೆ ಕೆಲವು ನಾಯಕರು ಬಹಿರಂಗವಾಗಿಯೇ ಸಪೋರ್ಟ್ ಮಾಡುವುದಿಲ್ಲವೆಂದು ಕೊಟ್ಟಿರುವ ಹೇಳಿಕೆ ಮತ್ತಷ್ಟು ದೋಸ್ತಿ ಸರ್ಕಾರದಲ್ಲಿ ಮನಸ್ತಾಪ ಭುಗಿಲೇಳುವಂತೆ ಮಾಡಿದೆ.
ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕೆ ಆಗಮಿಸಿಸಲಿರುವ ಹಿನ್ನಲೆಯಲ್ಲಿ ಸಮಾವೇಶದ ಸಿದ್ಧತೆ ಕುರಿತಾಗಿ ಮೈಸೂರು ಜಿಲ್ಲೆ ಕೆ. ಆರ್ ನಗರದಲ್ಲಿ ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯದಲ್ಲಿ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಗೆ ಬೆಂಬಲ ನೀಡಲು ವಿರೋಧಿಸಿ ಗಲಾಟೆ ಮಾಡಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಿತ್ತಾಟವೇ ನಡೆದಿದೆ. ಮೊದಲಿನಿಂದಲೂ ಪಕ್ಷದೊಳಗಿದ್ದ ಭಿನ್ನಾಭಿಪ್ರಾಯ ಇದೀಗ ಸ್ಫೋಟವಾಗಿದೆ. ಮೈತ್ರಿ ಅಭ್ಯರ್ಥಿಗೆ ನಾವ್ ಸಪೋರ್ಟ್ ಮಾಡುವುದಿಲ್ಲವೆಂದು ಖಡಕ್ ಆಗಿಯೇ ಕೆಲ ನಾಯಕರು ಕಾರ್ಯಕರ್ತರು ಹೇಳಿಕೆ ನೀಡಿದ್ದಾರೆ. ಬೇಕಿದ್ದರೆ ಪಕ್ಷದಿಂದ ನಮ್ಮನ್ನ ಉಚ್ಚಾಟನೆ ಮಾಡಿ ಎಂದು ಕೂಡ ಹೇಳಿದ್ದಾರೆ.ತಿಪ್ಪರ್ ಲಾಗ ಹಾಕಿದ್ರೂ ನಾವಂತೂ ನಿಖಿಲ್ ಗೆ ಸಹಕಾರ ನೀಡುವುದಿಲ್ಲೆಂದಿದ್ದಾರೆ.ರಾಹುಲ್ ಗಾಂಧಿ ಕಾರ್ಯಕ್ರಮವನ್ನು ನಾವು ಬೆಂಬಲಿಸಿ ಸಮಾವೇಶದ ಯಶಸ್ಸಿಗೆ ಶ್ರಮಿಸುತ್ತೇವೆ. ಆದರೆ, ನಿಖಿಲ್'ಗೆ ಬೆಂಬಲ ನೀಡುವುದಿಲ್ಲ ಎಂದು ಅನೇಕ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
Comments