‘ನಡೆದಾಡುವ ದೇವರ’ ಅಂತಿಮ ದರ್ಶನಕ್ಕೆ ಬಂದವರೆಷ್ಟು ಗೊತ್ತಾ…?

ನಡೆದಾಡುವ ದೇವರು ಶ್ರೀ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೇ ತುಮಕೂರಿನತ್ತ ಧಾವಿಸಿ ಬಂದ ಜನಸಾಗರವೆಷ್ಟು ಗೊತ್ತಾ…? ತಮ್ಮ ದೇವರನ್ನು ನೋಡಲು ಮುಗಿ ಬೀಳುತ್ತಿದ್ದ ದೃಶ್ಯ ಎಲ್ಲೆಂದರಲ್ಲಿ ಕಂಡು ಬರುತ್ತಿತ್ತು. ತುಮಕೂರಿನ ರಸ್ತೆಗಳು ಜನರಿಂದ ತುಂಬಿ ಹೋಗಿತ್ತು. ಶಿವಕುಮಾರ ಸ್ವಾಮೀಜಿಗಳನ್ನು ಕಣ್ತುಂಬಿಕೊಳ್ಳಲು ದೂರ-ದೂರದಿಂದ ಭಕ್ತಸಾಗರ ಹರಿದು ಬಂದಿತ್ತು. ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಬಂದಿದ್ದ ಭಕ್ತರ ಕಣ್ಣಾಲಿಗಳು ತುಂಬಿ ಬಂದಿದ್ದವು. ಮಠದ ಮಕ್ಕಳ ರೋಧನ ಮುಗಿಲು ಮುಟ್ಟಿತ್ತು.
ತ್ರಿವಿಧ ದಾಸೋಹಿ ದೇವರು ಇನ್ನಿಲ್ಲ ಎಂಬುದನ್ನು ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಸಾವಿನಲ್ಲೂ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಬಂದಿದ್ದ ಭಕ್ತ ವೃಂದಕ್ಕೆ 2 ದಿನಗಳ ಕಾಲ ಶಿಸ್ತುಬದ್ಧ ದಾಸೋಹವನ್ನು ಮಠದಲ್ಲಿ ನೆರವೇರಿಸಲಾಯಿತು. ಬಿಲ್ವಪತ್ರೆ,ವಿಭೂತಿಗಳಿಂದ ಲೀನರಾದ ಸ್ವಾಮಿಯ ಅಂತಿಮ ದರ್ಶನ ಕಣ್ಣಿಗೆ ಕಟ್ಟುವಂತಿತ್ತು. ಬಂದವರು ಉಪವಾಸದಿಂದ ಹಾಗೇ ಹೋಗಬಾರದೆಂಬುದು ಸ್ವಾಮೀಜಿಯ ಉದ್ದೇಶವಾಗಿತ್ತು. ಅದರಂತೇ ಅಪಾರ ಸಂಖ್ಯೆಯ ಬಾಣಸಿಗರು, ಮಠದ ಮಕ್ಕಳು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಶಿಸ್ತುಬದ್ಧವಾಗಿ ಮಾಡಿದ್ದರು. ಯಾರಿಗೂ ತೊಂದರೆಯಾಗದಂತೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಸಾದವನ್ನೂ ವಿತರಿಸಲಾಯಿತು. ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ, ಸ್ವಾಮೀಜಿಯ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಅಂತಿಮ ದರ್ಶನಕ್ಕೆ ತೆರಳುವ ಭಕ್ತರಿಗೆ ವಿಶೇಷ ಬಸ್, ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಮಾಹಿತಿ ಪ್ರಕಾರ ಸುಮಾರು 25 ಲಕ್ಷ ಮಂದಿ ಸ್ವಾಮೀಜಿಯ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
Comments