ಎಲ್ಲಿಂದ ಬಂದವು.... KSRTC ಬಸ್ ನಲ್ಲಿ ಸಿಕ್ತು ರಾಶಿಗಟ್ಟಲೇ ಬೆಳ್ಳಿ ದೀಪಗಳು...!!!
ಎಲ್ಲಿಂದ ಬಂತು....ವಿಜಯವಾಡ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ಬಸ್ಸಿನಲ್ಲಿ ಬೆಳ್ಳಿ ದೀಪಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಇವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದ್ದು ಎಂದು ತಿಳಿದು ಬಂದಿದೆ. ಅಕ್ರಮವಾಗಿ ಸಾಗಿಸುತ್ತಿದ್ದ 15 ಲಕ್ಷ.ರೂ. ಮೌಲ್ಯದ ಬೆಳ್ಳಿ ದೀಪಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಬಂಧಪಟ್ಟ ಬಸ್ಸಿನ ಚಾಲಕ ಮತ್ತು ನಿರ್ವಾಹಕರನ್ನು ಅಮಾನತುಗೊಳಿಸಿ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ. ಬೆಂಗಳೂರು ಕೇಂದ್ರೀಯ ವಿಭಾಗೀಯ ಘಟಕದ ಕೆಎ 57, ಎಫ್ 2844 ನಂಬರಿನ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಹೊಸಕೋಟೆ ಬಳಿಯ ಟೋಲ್‌ನಲ್ಲಿ ತಪಾಸಣೆ ನಡೆಸಲಾಗಿದೆ.
ಬಸ್ಸಿನ ಡಿಕ್ಕಿಯಲ್ಲಿ ನಾಲ್ಕು ಬ್ಯಾಗುಗಳಲ್ಲಿ 40.950 ಕಿೆತೂಕದ 699 ಬೆಳ್ಳಿ ದೀಪಗಳು ಪತ್ತೆಯಾಗಿವೆ. ಈ ಬಗ್ಗೆ ನಿರ್ವಾಹಕರನ್ನು ವಿಚಾರಿಸಿದಾಗ ವಾರಸುದಾರರು ಯಾರು ಎಂಬುದು ತಮಗೆ ಗೊತ್ತಿಲ್ಲ ಎಂದು ಉತ್ತರಿಸಿದರು. ಬಸ್‌ನಲ್ಲಿ ಬೆಳ್ಳಿ ವಸ್ತು ಸಾಗಿಸುತ್ತಿರುವ ಮಾಹಿತಿ ಮೊದಲೇ ಗೊತ್ತಿದ್ದರಿಂದ ತಪಾಸಣೆ ವೇಳೆ ಹೆಚ್ಚುವರಿಯಾಗಿ ಚಾಲಕ ಮತ್ತು ನಿರ್ವಾಹಕರನ್ನು ಕರೆದುಕೊಂಡು ಹೋಗಲಾಗಿತ್ತು. ಹಾಗಾಗಿ ಸದರಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಇಳಿಸಿ ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದವರನ್ನು ನಿಯೋಜಿಸಿ ಬಸ್ ಕಾರ್ಯಾಚರಣೆ ಮಾಡಲಾಯಿತು.
ನಂತರ ದೀಪಗಳನ್ನು ವಶಪಡಿಸಿಕೊಂಡ ಬಳಿಕ ಅವುಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಭಾಕರ್ ರೆಡ್ಡಿ, ವಿಭಾಗೀಯ ಭದ್ರತಾ ನಿರೀಕ್ಷಕಿ ರಮ್ಯ ಸಿ.ಕೆ., ಸಂಚಾರ ನಿಯಂತ್ರಕ ಛಲಪತಿ ಎಚ್.ಎಂ. ಅವರು ಈ ತಪಾಸಣೆ ನಡೆಸಿ ಕ್ರಮಕೈಗೊಂಡಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ನಿರಂತರವಾಗಿ ಹಾಗೂ ಅನಿರೀಕ್ಷಿತವಾಗಿ ತಪಾಸಣಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅನುಮಾನ ಬರುವ ಬಸ್ಸುಗಳನ್ನು ಪರಿಶೀಲಿಸಲಾಗುತ್ತದೆ. ಅದರಂತೆ ಶುಕ್ರವಾರ ತಪಾಸಣೆ ನಡೆಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ
Comments