ಎರಡು ದಿನ ಭಾರತ್ ಬಂದ್ : ಏನ್ ಉಂಟು..? ಏನಿಲ್ಲ..?
ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಕೂಡ ಪ್ರಯೋಜನವಾಗಿಲ್ಲವೆಂದು ಈ ಬಾರಿ ಭಾರತ್ ಬಂದ್ ಗೆ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧ ಮಾಡಿ, ಕಾರ್ಮಿಕರ ಹಲವು ರೀತಿಯ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿ ಯು) ಜ.8 ಮತ್ತು 9 ರಂದು ಕರೆ ನೀಡಿರುವ 'ಭಾರತ್ ಬಂದ್'ನಿಂದಾಗಿ ರಾಜ್ಯದಲ್ಲೂ ಕೆಲ ಸೇವೆಗಳಲ್ಲಿ ಏರು ಪೇರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.. ಎಐಟಿಯುಸಿ, ಸಿಐಟಿಯು, ಎನ್ ಟಿಯುಸಿ, ಎಚ್‌ಎಂಎಸ್ ಸೇರಿದಂತೆ ರಾಷ್ಟ್ರಮಟ್ಟದ ಹನ್ನೊಂದು ಸಂಘಟನೆಗಳು ಈ ಎರಡು ದಿನಗಳ ಕಾಲ ದೇಶವ್ಯಾಪ್ತಿ ಬಂದ್‌ಗೆ ಕರೆ ನೀಡಿದ್ದು, ರಾಜ್ಯದಲ್ಲಿ ಕೆಲ ಸಂಘಟನೆಗಳು ನೇರವಾಗಿ ಬಂದ್‌ನಲ್ಲಿ ಭಾಗವಹಿಸುತ್ತಿವೆ ಎನ್ನಲಾಗಿದೆ. ಈ ಬಂದ್ ನಿಂದ ಕೇಂದ್ರ ಸರ್ಕಾರ ಭಾರೀ ನಷ್ಟವನ್ನುಅನುಭವಿಸುವುದಂತೂ ಸುಳ್ಳಲ್ಲ..
ಹಾಲು, ತರಕಾರಿ, ಔಷಧಿ, ಆಸ್ಪತ್ರೆ, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ಸೇವೆಗಳಿಗೆ ಬಂದ್ ನಿಂದ ವಿನಾಯಿತಿ ನೀಡಿದ್ದು, ಈ ಸೇವೆಗಳು ಎಂದಿನಂತೆ ಮುಂದುವರಿಯಲಿವೆ. ಆಟೋ, ಬಸ್ ಸೇವೆಯಲ್ಲಿ ಕೊಂಚ ವ್ಯತ್ಯವಾಗುವ ಸಾಧ್ಯತೆಯಿದೆ. ಇನ್ನು ಶಾಲಾ-ಕಾಲೇಜುಗಳಿಗೆ ಬಸ್ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ಬಸ್ ಸಂಚಾರ ಸ್ಥಗಿತಕ್ಕೆ ಸಾರಿಗೆ ಸಂಘಟನೆಗಳು ಕರೆ ನೀಡಿದ್ದಾದರೂ ಕೆಎಸ್‌ಆರ್‌ಟಿಸಿ ಸೇವೆಯನ್ನು ಮುಂದುವರಿಸಲು ನಿಗಮ ಮಂಡಳಿ ನಿರ್ಧಾರ ಮಾಡಿದೆ.. 'ಬಿಎಂಟಿಸಿ, ಬಿಎಂಆರ್‌ಸಿಎಲ್ ಸಂಸ್ಥೆಗಳು ಕೂಡ ಎಂದಿನಂತೆ ಸೇವೆ ಮುಂದುವರಿಸಲು ನಿರ್ಧಾರ ಮಾಡಿವೆ. ಪ್ರಮುಖವಾಗಿ ಸಾರಿಗೆ ನೌಕರರು ಕರ್ತವ್ಯಕ್ಕೆ ಬರದೆ ಬಂದ್‌ನಲ್ಲಿ ಭಾಗವಹಿಸಿದರೆ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಆದರೆ, ಈಗಾಗಲೇ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಈ ಎರಡೂ ದಿನ ಯಾವುದೇ ನೌಕರರಿಗೆ ರಜೆ ನೀಡದಂತೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಇನ್ನೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ,ಈಶಾನ್ಯ, ವಾಯುವ್ಯ,ಸಾರಿಗೆ ನಿಗಮದ ಬಸ್‌ಗಳು,ಆಟೋ ಗಳು, ಬಿಸಿಯೂಟಸೇವೆ, ಅಂಗನವಾಡಿ ಈ ಸೇವೆಗಳು ಇರುವುದಿಲ್ಲ ಎನ್ನಲಾಗುತ್ತಿದೆ.. ಇನ್ನೂ ಮೆಟ್ರೋ ರೈಲು ಸಂಚಾರ,ಓಲಾ ಹಾಗೂ ಊಬರ್ಟ್ಯಾಕ್ಸಿ, ಲಾರಿ, ಪೆಟ್ರೋಲ್ ಬಂಕ್, ಪ್ರವಾಸಿ ವಾಹನಗಳು, ಹಾಲು, ತರಕಾರಿ, ಔಷಧ, ಆಸ್ಪತ್ರೆಗಳು ಇರುತ್ತವೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈ ಭಾರತ್ ಬಂದ್ ನಿಂದ ಕೇಂದ್ರ ಸರ್ಕಾರ ಕಾರ್ಮಿಕ ಬೇಡಿಕೆಗಳನ್ನು ಈಡೇರಿಸುವಂತೆ ಆದರೆ ಸಾಕು ಎನ್ನುವುದು ಕಾರ್ಮಿಕರ ಮಾತಾಗಿದೆ.
Comments