ಐಟಿ ರೈಡ್'ನಿಂದ ಬೇಸರವಾಗಿದ್ದು ನಿಜ, ಆದರೆ : ಶಿವಣ್ಣ
ಐಟಿ ದಾಳಿ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿದ ಶಿವಣ್ಣ, ನಾನ್ಯಾಕೆ ಆತಂಕ ಪಡಲೀ, ಅಧಿಕಾರಿಗಳು ಅವರ ಕರ್ತವ್ಯ ನಡೆಸಿದ್ದಾರೆ. ತಪಾಸಣೆ ನಡೆಸಿ ಮನೆಯಲ್ಲಿದ್ದ ಕೆಲ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತು ನಮಗೂ ನೋಟೀಸ್ ಜಾರಿ ಮಾಡಿದ್ದಾರೆ. ಆಗ ನಾನು ಮತ್ತು ಪತ್ನಿ ಗೀತಾ ಅವರು ಹೇಳಿಕೆ ನೀಡಬೇಕಾಗುತ್ತದೆ ಎಂದು ಅವರು ಹೇಳಿದರು. ಮೊದಲನೆಯ ದಿನ ದಾಳಿ ನಡೆದಾಗ ನಾನು ಮಲಗಿದ್ದೆ, ಆದರೆ, ಅವರ ಕರ್ತವ್ಯಕ್ಕೆ ನಾನು ಅಡ್ಡಿಪಡಿಸಲಿಲ್ಲ. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ ಹಾಗೂ ಅವರು ಕೇಳಿದ ದಾಖಲೆಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.
ನಮ್ಮ ಮನೆ ದೊಡ್ಡದು ಅದಕ್ಕೆ ನಾಲ್ಕು ದಿನ ತೆಗೆದುಕೊಂಡಿದ್ದಾರೆ ಎಂದು ಹಾಸ್ಯ ಮಿಶ್ರಿತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು. ಶಿವರಾಜ್ ಕುಮಾರ್ ತುಂಬಾ ಕ್ಯಾಶ್ಯುಯಲ್ ಆಗಿಯೇ ಹೇಳಿಕೆ ನೀಡಿದ್ದಾರೆ. ನಾನು ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿಯೇ ತೆರಿಗೆ ಕಟ್ಟುತ್ತಿದ್ದೇನೆ. ಅನುಮಾನದಿಂದ ಈ ರೀತಿ ರೈಡ್ ಆಗಿದೆ ಇದರಲ್ಲಿ ಭಯಪಡುವ ಅಗತ್ಯವೇನಿದೆ ಎಂದಿದ್ದಾರೆ.ನನ್ನನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರಿಂದ ಸಹಕರಿಸಬೇಕಾಗಿತ್ತು. ಸೋ ಎಲ್ಲೂ ಹೊರಗೂ ಹೋಗಲೂ ಆಗಲಿಲ್ಲ. ಹಾಗಾಗಿ ಮನೆಯಲ್ಲೇ ಸ್ವಲ್ಪ ಕಾಲ ನಾನೂ ಹಾಗೂ ಗೀತಾ ವಾಕ್ ಮಾಡಿದೆವು. ಇಷ್ಟು ಸುದೀರ್ಘವಾಗಿ ನಡೆದ ದಾಳಿಯಿಂದಾಗಿ ಸ್ವಲ್ಪ ಬೇಸರವಾಗಿದ್ದು ನಿಜ ಆದರೆ ಏನು ಮಾಡೋಕಾಗುತ್ತೆ ನೀವೇ ಹೇಳಿ. ಅವರು ಅವರ ಕರ್ತವ್ಯ ಮಾಡಿದ್ದಾರೆ ನಾವು ಕೂಡ ಸಹಕರಿಸಿದ್ದೇವೆ. ಅಷ್ಟೆ. ಅಧಿಕಾರಿಗಳು ಕೂಡ ಸಂಯಮದಿಂದಲೇ ವರ್ತಿಸಿದ್ದಾರೆ. ವಿಚಾರಣೆ ಇದ್ದಾಗ ಇಬ್ಬರು ಹೋಗಿ ಬರುತ್ತೇವೆ ಎಂದಿದ್ದಾರೆ.
Comments