ಎಚ್ಚರ..! ಕಟ್ಟೆಚ್ಚರ..!! : ಮಹಾಮಾರಿ ಮಂಗನಕಾಯಿಲೆಗೆ ಬಲಿಯಾಗದಿರಿ…!!!

ಶಿವಮೊಗ್ಗ ಜಿಲ್ಲೆಯಾದ್ಯಂತ ಈಗಾಗಲೇ ಸಿಕ್ಕಾಪಟ್ಟೆ ಮಹಾ ಮಾರಕ ಮಂಗನ ರೋಗ ವ್ಯಾಪಿಸಿದೆ. ಸದ್ಯ ನಾಲ್ವರು ಬಲಿಯಾಗಿದ್ದು ಸುಮಾರು 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಇದೆ. ಪ್ರತೀ ವರ್ಷವು ಈ ಕಾಯಿಲೆ ಬರದಂತೆ ಅಥವಾ ಈ ರೋಗ ತಡೆಯಲು ಲಸಿಕೆ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಲಸಿಕೆ ಹಾಕುವ ಮುನ್ನವೇ ನಾಲ್ವರು ಮೃತಪಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ.ಸಾರ್ವಜನಿಕರ ಗಮನಕ್ಕೆ ವೈದ್ಯಕೀಯ ಇಲಾಖೆಯಿಂದ ರೋಗ ತಡೆಗಟ್ಟಲು ಈಗಾಗಲೇ ಅರಿವು ಮೂಡಿಸಲಾಗಿದೆ.ಕಾಡಿನೊಳಗೆ ಸಂಚರಿಸುವ ಪ್ರತಿಯೊಬ್ಬರು ಡಿಎಂಪಿ ಆಯಿಲ್‍ನ್ನು ಹಚ್ಚಿಕೊಳ್ಳಬೇಕು. ಈ ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಮುಖದ ಭಾಗವನ್ನು ಹೊರತುಪಡಿಸಿ ಮೈ, ಕೈಗೆ ಲೇಪಿಸಿಕೊಳ್ಳಬೇಕು. ಇದರ ಅವಧಿ 6 ಗಂಟೆಯಾಗಿದ್ದು, ಮಂಗಗಳು ಸಾವಿಗೀಡಾಗಿರುವುದು ಕಂಡುಬಂದಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳು, ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ಮಾಹಿತಿ ನೀಡಬೇಕು.
ಯಾವುದೇ ಕಾರಣದಿಂದಲೂ ಮಂಗ ಸಾವನ್ನಪ್ಪಿದ್ದರೂ ಸಹ ಅದರ ಬಳಿ ಯಾರೂ ಹೋಗಬಾರದು, ಕೈಯಿಂದ ಮುಟ್ಟಬಾರದು. ಮಂಗ ಸಾವನ್ನಪ್ಪಿದ ಜಾಗದಲ್ಲಿ ಕನಿಷ್ಠ ಒಂದು ವಾರ ಯಾರೂ ಓಡಾಡಬಾರದು. ಈ ವ್ಯಾಪ್ತಿಯ 150 ಅಡಿ ಸುತ್ತಳತೆಯ ಪ್ರದೇಶದಲ್ಲಿ ಮೆಲಾಥಿನ್ ಸಿಂಪಡಿಸಿ ಶವ ಪರೀಕ್ಷೆ ನಡೆಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು.
ಸಾಗರದ ಮಂಡವಳ್ಳಿಯ ಪಾರ್ಶ್ವನಾಥ ಜೈನ್(47), ವಾಟೆಮಕ್ಕಿಯ ಕೃಷ್ಣಪ್ಪ(54), ಕಂಚಿಕಾಯಿ ಮಂಜುನಾಥ್(24) ಮತ್ತು ತೀರ್ಥಹಳ್ಳಿಯ ಗಂಟೆ ಜನಗಲು ಗ್ರಾಮದ ಸುಂದರಿ ಎಂಬವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಿಬಿರ ಆಯೋಜನೆ ಮಾಡುವುದರ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮನವಿ ಮಾಡಲಾಗಿದೆ. ಇದರಲ್ಲಿ ಪಿಡಿಒ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸೇರಿದಂತೆ ಆರೋಗ್ಯ ಇಲಾಖೆ ವತಿಯ ಅಧಿಕಾರಿಗಳು ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ರೋಗ ಹರಡದಂತೆ ಕಟ್ಟೆಚ್ಚರ ವಹಿಸಿದ್ದಾರೆ.
Comments