ಸಂಬಂಧಗಳನ್ನ ಗಟ್ಟಿಗೊಳಿಸುವುದಕ್ಕೆ ಇಲ್ಲಿದೆ ಸೂಕ್ತ ಪರಿಹಾರಗಳು

ಕೆಲವೊಮ್ಮೆ ಸಂಬಂಧಗಳು ಎಂದ ಕೂಡಲೆ ಅಲ್ಲಿ ಸುಖ ದುಃಖ, ನೋವು ನಲಿವು, ಕೋಪ ಮುನಿಸು, ಶಾಂತಿ ನೆಮ್ಮದಿ ಹೀಗೆ ಎಲ್ಲವೂ ಇರಲೇಬೇಕು. ಹಾಗಂತ ಇವುಗಳ ಅಸಮಾನತೆಯಿಂದ ಸಂಬಂಧಗಳನ್ನ ಕಳೆದುಕೊಳ್ಳೋದು ಮೂರ್ಖತನ. ನಿಮ್ಮ ಸಂಬಂಧಗಳನ್ನ ಉಳಿಸಿಕೊಳ್ಳೋಕೆ ಇಲ್ಲಿದೆ ಕೆಲ ಸೂಪರ್ ಟಿಪ್ಸ್. ಕೆಲವು ಸಂದರ್ಭಗಳಲ್ಲಿ ಮಿಸ್ಟರ್ ಪರ್ಫೆಕ್ಟ್ ಕೂಡ ತಪ್ಪು ಮಾಡುತ್ತಾನೆ. ಹಾಗೆ ನೋಡಿದರೆ ಮನುಷ್ಯ ಹುಟ್ಟಿನಿಂದಲೇ ಅಪೂರ್ಣ. ಎಲ್ಲರೂ ಕೂಡ ತಪ್ಪು ಮಾಡುತ್ತಾರೆ.
ಹಾಗೆ ನಮ್ಮ ಜೊತೆಗಿರುವ ಸಂಗಾತಿಗಳೂ ಕೂಡ. ನಾವು ಅವರ ತಪ್ಪು, ಅಂದಿನ ಪರಿಸ್ಥಿತಿ, ಸಮಸ್ಯೆಯ ಮೂಲವನ್ನು ಮೊದಲು ಅರಿಯಬೇಕು. ಆಗ ನಮ್ಮ ಸಂಬಂಧಗಳಲ್ಲಿ ದೊಡ್ಡ ಬಿರುಕು ಉಂಟಾಗುವುದಿಲ್ಲ. ತಾಳ್ಮೆಯಿಂದ ಸಂಗಾತಿಯ ತಪ್ಪುಗಳ ಮೂಲ ಅರಿತು ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು. ಸತ್ಯವೇ ಕೊನೆಗೆ ಗೆಲ್ಲುವುದು ಎಂದು ಎಲ್ಲರೂ ಹೇಳುತ್ತಾರೆ. ಇದು ಸತ್ಯ ಕೂಡ ಹೌದು. ಆದರೆ ಎಲ್ಲರೂ ಎಲ್ಲಾ ಸಮಯದಲ್ಲಿಯೂ ಸತ್ಯ ಹೇಳಲು ಸಾಧ್ಯವಿಲ್ಲ ಅಲ್ಲವೇ? ಕೆಲವು ವೇಳೆ ಸಂಬಂಧ ಉಳಿದುಕೊಳ್ಳಲು, ಬೆಳೆಯಲು ಸುಳ್ಳನ್ನೂ ಹೇಳಬೇಕಾಗುತ್ತದೆ. ಅದಕ್ಕೇ ಅಲ್ಲವೇ ನಮ್ಮ ಹಿರಿಯರು ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂದಿರುವುದು. ನಾವು ಕೆಲವು ವೇಳೆಗಳಲ್ಲಿ ಅನಿವಾರ್ಯತೆಯ ಸುಳಿಗೆ ಸಿಲುಕಿ ಸುಳ್ಳನ್ನು ಹೇಳಬೇಕಾಗುತ್ತದೆ. ಸಂಬಂಧವೇ ಬೀಳುತ್ತಿದೆ ಎನ್ನುವ ಅನಿವಾರ್ಯ ವೇಳೆಯಲ್ಲಿ ಅದನ್ನು ಉಳಿಸಿಕೊಳ್ಳಲು ಸುಳ್ಳು ಸಹಾಯ ಮಾಡುತ್ತದೆ. ಆದರೆ ಇದನ್ನು ಕೊನೆಯವರೆಗೂ ಮುಚ್ಚಿಟ್ಟುಕೊಳ್ಳಬಾರದು. ಸರಿಯಾದ ಸಮಯದಲ್ಲಿ ನಾವು ಹೇಳಿದ ಸುಳ್ಳನ್ನು ಸಂಗಾತಿಗೆ ತಿಳಿಸಿಬಿಡಬೇಕು. ಇದರಿಂದ ಬಾಂಧವ್ಯ ಗಟ್ಟಿಯಾಗುತ್ತದೆ. ಸಂಬಂಧಗಳು ಹೆಚ್ಚಿನ ವೇಳೆಯಲ್ಲಿ ದೂರವಾಗುವುದೇ ಈ ಮೋಸದಿಂದ. ಎಲ್ಲ ಸಂಬಂಧಗಳು ಮೊದಲಿಗೆ ಹುಟ್ಟುವುದು ನಂಬಿಕೆಯ ನೆಲೆಯಲ್ಲಿ. ಇನ್ನು ಕೊನೆಯಾಗುವುದು ಮೋಸದ ಬಲೆಯಲ್ಲಿ. ನಂಬಿಕೆಗೆ ಸಂಬಂಧ ಕಟ್ಟುವ ಗುಣವಿದ್ದರೆ ಮೋಸಕ್ಕೆ ಅದನ್ನು ಮುರಿಯುವ ಗುಣವಿದೆ. ಸಂಗಾತಿಯ ಪ್ರತಿಯೊಂದು ಕ್ಷಣಗಳಲ್ಲಿಯೂ ಪಾಲುದಾರರಾಗಬೇಕು.ನೋವು-ನಲಿವುಗಳಲ್ಲಿ ಜೊತೆಯಾದವರು ಮಾತ್ರ ಒಳ್ಳೆಯ ಸಂಗಾತಿಗಳಾಗಲು ಸಾಧ್ಯ. ಪ್ರತಿ ಹೆಜ್ಜೆಯಲ್ಲೂ ಜೊತೆಗೆ ಸಾಗಿದಾಗ ಮಾತ್ರ ಬದುಕು ಸುಂದರ. ಸಂಬಂಧ ಸೊಗಸು.
Comments