ಗುಡ್ ನ್ಯೂಸ್: ಸಾಲಮನ್ನಾ ಚಾಲನೆಗೆ ದಿನಾಂಕ ಘೋಷಿಸಿದ ಸಿಎಂ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ರೈತರ 'ಸಾಲ ಮನ್ನಾ' ಯೋಜನೆ ಘೋಷಿಸಿದ್ದು, ಅದಿನ್ನೂ ಅನುಷ್ಠಾನಕ್ಕೆ ಬಾರದ ಕಾರಣ, ರೈತ ಸಮುದಾಯ ಸಾಲ ಮನ್ನಾ ಆಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದರು. ಸಿಎಂ ಕೊನೆಗೂ ಈ ಕುರಿತು ಸಮಾಧಾನಕರ ಸಂಗತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾ ಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸುದೀರ್ಘ ಸಭೆಯ ನಂತರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 5ರಿಂದ ರೈತರ ಸಾಲಮನ್ನಾ ಪ್ರಕ್ರಿಯೆ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಡಿ. 1ರೊಳಗೆ ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಡಿ.೫ರಿಂದ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಗಳ ಸಾಲಮನ್ನಾ ಪ್ರಕ್ರಿಯೆ ಆರಂಭಿಸಲಾಗುವುದು. 33 ರಾಷ್ಟ್ರೀಕೃತ ಬ್ಯಾಂಕ್ಗಳ ಆರೂವರೆ ಸಾವಿರ ಶಾಖೆಗಳಿಂದ 20.80 ಲಕ್ಷ ರೈತರ ಬೆಳೆ ಸಾಲ ಕುರಿತು ಮಾಹಿತಿ ಕ್ರೋಢೀಕರಿಸಲಾಗಿದೆ. ಅಂತೆಯೇ ಸಹಕಾರ ಕ್ಷೇತ್ರದಲ್ಲಿ 21 ಲಕ್ಷ ರೈತರ ಬೆಳೆ ಸಾಲದ ಮಾಹಿತಿ ಸಂಗ್ರಹಿಸಲಾಗಿದೆ. ಮಾಹಿತಿ ಕ್ರೋಢೀಕರಣ ಮಾಡುವಲ್ಲಿ ಶೇ.92ರಷ್ಟು ಸಾಧನೆ ಮಾಡಲಾಗಿದೆ.
Comments