ಈ ಜಗದ್ವಿಖ್ಯಾತ ಫೋಟೋವನ್ನು ಸೆರೆಹಿಡಿದ ಛಾಯಾಗ್ರಾಹಕ ಏನಾದ ಗೊತ್ತೇ..? ಛಾಯಗ್ರಾಹಕನ ಮನಕಲಕುವ ದುರಂತ ಕಥೆ..!!
ಈ ಫೋಟೋ ಬಹಳ ಫೇಮಸ್ ಆಗಿದೆ, ಸಾಮಾನ್ಯವಾಗಿ ನೀವು ಈ ಮೊದಲು ಈ ಫೋಟೋವನ್ನು ಎಲ್ಲಾದರೂ ನೋಡಿಯೇ ಇರುತ್ತೀರಿ. ಹಸಿವಿನಿಂದ ನರಳುತ್ತಿದ್ದ ಆಫ್ರಿಕನ್ ಸಣ್ಣ ಬಾಲಕಿ ಮತ್ತು ತನ್ನ ಆಹಾರಕ್ಕಾಗಿ ಆಕೆ ಸಾಯುವುದನ್ನು ಪಕ್ಕದಲ್ಲೇ ಕಾದು ಕುಳಿತಿದ್ದ ಒಂದು ರಣಹದ್ದು ಈ ಫೋಟೋದಲ್ಲಿ ಇದೆ. ‘ದಿ ವಲ್ಚರ್ ಆಂಡ್ ದಿ ಲಿಟ್ಟಲ್ ಗರ್ಲ್’ ಹೆಸರಿನ ಈ ಫೋಟೋವನ್ನು 1993ರಲ್ಲಿ ಸುಡಾನಿನಲ್ಲಿ ಭೀಕರ ಬರಗಾಲದ ಸಮಯದಲ್ಲಿ ಸೌತ್ ಆಫ್ರಿಕಾದ ಖ್ಯಾತ ಫೋಟೋ ಜರ್ನಲಿಸ್ಟ್ ಕೆವಿನ್ ಕಾರ್ಟರ್ ಅವರು ಸೆರೆಹಿಡಿದಿದ್ದರು. ಫೋಟೋದಲ್ಲಿ ಕಾಣುವ ಆ ಆಫ್ರಿಕನ್ ಬಾಲಕಿ ಹಸಿವನ್ನು ತಾಳಲಾರದೆ ಸಮೀದಲ್ಲೇ ವಿಶ್ವಸಂಸ್ಥೆ ಸ್ಥಾಪಿಸಿದ ಗಂಜಿ ಕೇಂದ್ರಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಳು. ಆದರೆ ಬಹಳ ದಿನಗಳಿಂದ ಆಹಾರವಿಲ್ಲದೆ ಕಾಲುಗಳ ಚಲನಾ ಶಕ್ತಿ ನಶಿಸಿ ಆ ಪುಟ್ಟ ಮಗು ತೆವಳಿಕೊಂಡು ಹೋಗಲು ಪ್ರಯತ್ನಿಸುತ್ತಿತ್ತು. ಆದರೆ ಆ ಮಗು ಅಂದು ಗಂಜಿ ಕೇಂದ್ರವನ್ನು ತಲುಪಿತಾ ಅಥವಾ ಅಲ್ಲೇ ಸತ್ತು ರಣ ಹದ್ದುವಿಗೆ ಆಹಾರವಾಯಿತಾ ಎಂಬುದು ಇವತ್ತಿಗೂ ಪ್ರಶ್ನೆಯಾಗಿಯೇ ಉಳಿದಿದೆ.
ಈ ಫೋಟೋಗಾಗಿ ಕೆವಿನ್ ಕಾರ್ಟರ್ ರವರಿಗೆ 1993ರಲ್ಲಿ ಪುಲಿಟ್ಜರ್ ಪ್ರಶಸ್ತಿ ಕೂಡ ಲಭಿಸಿತ್ತು. ಆದರೆ ಕೆವಿನ್ ಮಾತ್ರ ಈ ಪುರಸ್ಕಾರದಿಂದ ಖುಷಿ ಪಡಲೇ ಇಲ್ಲ. ಇದಾಗಿ ಕೆಲವೇ ತಿಂಗಳಲ್ಲಿ ಆಗ 33 ವರ್ಷ ಪ್ರಾಯದವರಾಗಿದ್ದ ಕೆವಿನ್ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡರು. ಇಲ್ಲಿ ನಡೆದದ್ದೇನೆಂದರೆ, ಕೆವಿನ್ ಕಾರ್ಟರ್ ಅವರಿಗೆ ಈ ಫೋಟೋಗೆ ಪುಲಿಟ್ಜರ್ ಪ್ರಶಸ್ತಿ ಬಂದಾಗ ಅವರಿಗೆ ದೇಶ ವಿದೇಶಗಳಿಂದ ಪತ್ರಗಳು ಫೋನ್ ಕಾಲ್‌ಗಳು ಬರಲು ಪ್ರಾರಂಭಿಸಿದ್ದವು. ಟಿವಿ ಮಾಧ್ಯಮಗಳಲ್ಲೂ ಈ ವಿಷಯ ಚರ್ಚೆ ನಡೆಯುತ್ತಿತ್ತು.ಅವತ್ತು ಅವರಿಗೆ ಬಂದ ಒಂದು ಸಂದರ್ಶನದ ಫೋನ್ ಕರೆಯಲ್ಲಿ ವ್ಯಕ್ತಿಯೊಬ್ಬರು ‘ನಂತರ ಆ ಮಗುವಿಗೆ ಏನಾಯಿತು?’ ಅಂತ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಕೆವಿನ್ ‘ಇಲ್ಲ ನನಗೆ ಗೊತ್ತಿಲ್ಲ! ಅವತ್ತು ನನಗೆ ವಿಮಾನಕ್ಕೆ ಸಮಯವಾಗಿದ್ದ ಕಾರಣ ನಾನು ಬೇಗ ಅಲ್ಲಿಂದ ಹೊರಟೆ!’ ಎಂದರು.
ಕೆವಿನ್ ಉತ್ತರವನ್ನು ಕೇಳಿ ಆ ಕಡೆಯ ವ್ಯಕ್ತಿ ‘ನನ್ನ ಪ್ರಕಾರ ಆ ದಿನ ಅಲ್ಲಿ ಎರಡು ರಣಹದ್ದುಗಳಿದ್ದವು. ಒಂದರ ಕೈಯಲ್ಲಿ ಕ್ಯಾಮರಾ ಇತ್ತು.’ ಎಂದು ಹೇಳಿ ಫೋನ್ ಕಾಲ್ ಕಟ್ ಮಾಡಿದರು. ಆ ವ್ಯಕ್ತಿ ಹೇಳಿದ ಆ ಮಾತು ಕೆವಿನ್ ಮನಸ್ಸಿಗೆ ಎಷ್ಟು ನಾಟಿತೆಂದರೆ, ಆ ಮಗುವನ್ನು ರಕ್ಷಿಸಲು ನನ್ನಿಂದ ಆಗಲಿಲ್ಲವಲ್ಲ ಎಂಬ ದುಃಖದಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಕೆವಿನ್ ಕೆಲವೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು.ಈ ಘಟನೆ ಸ್ಮಾರ್ಟ್ ಫೋನ್ ಯುಗದಲ್ಲಿ ಜೀವಿಸುತ್ತಿರುವ ನಮ್ಮ ತಲೆಮಾರಿಗೂ ಪ್ರಸ್ತುತ. ಇವತ್ತು ಅಪಘಾತ ಅಥವಾ ಇನ್ನೇನಾದರೂ ಅವಘಡ ಸಂಭವಿಸಿದರೆ, ಅಪಘಾತ ನಡೆದ ವ್ಯಕ್ತಿಯನ್ನು ಬದುಕಿಸಲು ಜನರಿರುವುದಿಲ್ಲ. ಆದರೆ ಫೋಟೋ ಕ್ಲಿಕ್ಕಿಸಿ ವಾಟ್ಸಾಪ್‌ಗೆ ಹಂಚಲು ಎಷ್ಟು ಜನರಿದ್ದಾರೆ ಅಲ್ಲವೆ..? ಮಾನವೀಯತೆ ಸತ್ತ ಸಮಾಜವನ್ನು ನಾಗರಿಕ ಸಮಾಜ ಅಂತ ಕರೆಯಲು ಸಾಧ್ಯವೇ ಇಲ್ಲ.
Comments