ಮಹದಾಯಿಯ ಬಗ್ಗೆ ನಿಮಗೇನು ಗೊತ್ತು..? ಇದರ ಇತಿಹಾಸವೇನು..? ಏತಕ್ಕಾಗಿ ಈ ಹೋರಾಟ..? ತಿಳಿಯಲು ಈ ಲೇಖನ ಓದಿ

15 Aug 2018 6:00 PM | General
1272 Report

ಎಲ್ಲಾ ವಿಚಾರದಲ್ಲಿಯೂ ರಾಜಕೀಯ ಹುಡುಕುವ ನಮ್ಮ ರಾಜಕಾರಣಿಗಳು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಯೋಜನೆಯಲ್ಲಿಯೂ ರಾಜಕೀಯ ಮಾಡುತ್ತಾರೆಂದರೆ ನಾಚಿಕೆಯಾಗಬೇಕು. ಕನ್ನಡಿಗರಿಗೆ ದಕ್ಕಬೇಕಾದ ನೀರನ್ನು ಉಳಿಸಿಕೊಳ್ಳುವಲ್ಲಿ (ಕಾವೇರಿ) ವಿಫಲವಾಗಿರುವ ಸರ್ಕಾರ, ಅದೇ ನೀರನ್ನು (ಮಹದಾಯಿ) ಪಡೆಯುವಲ್ಲಿಯೂ ವಿಪಲವಾಗಿದೆ. ಪ್ರಾಮಾಣಿಕ ಇಚ್ಚಾಶಕ್ತಿಯಿಲ್ಲದೇ ಇರುವ ನಾಲಾಯಕ್​ ರಾಜಕಾರಣಿಗಳು ತಮ್ಮ ಪಕ್ಷದ ಉಳಿವಿಗಾಗಿ ಕಿತ್ತಾಡುತ್ತಿದ್ದಾರೆ, ಕಳಸ ಬಂಡೂರಿ ಯಾವ ರಾಜಕೀಯ ಪಕ್ಷದಿಂದ ಆದರೇನು ಅದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಬೇಕು ಎಂದು ಕಾದು ಕೂತಿರುವ ಉತ್ತರ ಕರ್ನಾಟಕದ ಹೋರಾಟಗಾರರ ಹಾದಿಯನ್ನೇ ತಪ್ಪಿಸಿದ್ದಾರೆ ಈ ರಾಜಕಾರಣಿಗಳು.

ಎಲ್ಲವನ್ನೂ ಪ್ರೆಸ್ಟೀಜ್​ ಆಗಿ ತೆಗೆದು ಕೊಳ್ಳುವ ಮಹದಾಯಿ ಯೋಜನೆ ಕ್ರೆಡಿಟ್​ ತಮಗೇನೆ ಸಿಗಬೇಕು ಎಂದು ಹಪಹಪಿಸುತ್ತಿರುವುದನ್ನ ನೋಡಿದರೆ ಹೇಸಿಗೆ ತರಿಸುತ್ತದೆ. ಇದಕ್ಕೆ ಉದಾಹರಣೆಯೆಂದರೆ ಪರಕ್ಕರ್​ ಯಡಿಯೂರಪ್ಪನವರಿಗೆ ನೀರು ಬಿಡುವ ಬಗ್ಗೆ ಯೋಚಿಸಿ ಮೂಲಭೂತ ಸೌಕರ್ಯವಾದ ಕುಡಿಯುವ ನೀರು ಬಿಡುತ್ತೇವೆ ಎಂದು ಪತ್ರ ಬರೆದರೆ. ಅತ್ತ ಸಿದ್ದರಾಮಯ್ಯ ಯಡಿಯೂರಪ್ಪ ಯಾರು ಎಂದು ಪ್ರಶ್ನಿಸುತ್ತಾರೆ. ಮತ್ತೊಂದೆಡೆ ಅವರೇ ಹೇಳುತ್ತಾರೆ ಇದೊಂದು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ನಾವು ಗೋವಾ ಕಾಂಗ್ರೆಸ್​ ಒಪ್ಪಿಸಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ.

ಮತ್ತೊಂದೆಡೆ ಯಡಿಯೂರಪ್ಪನವರ ಕಡೆ ತಿರುಗಿರುವ ಹೋರಾಟಗಾರರು ಇದಕ್ಕೆ ಅವರೇ ಪರಿಹಾರ ತೋರಿಸಬೇಕೆ ಎಂದು ಹಟಕ್ಕೆ ಬಿದ್ದಿದ್ದಾರೆ. ಅದಕ್ಕೆ ಕಾರಣ ಕಾಂಗ್ರೆಸ್​ ಆಗಿದ್ದರೂ ಕೂಡ ಮೂಲ ಕಾರಣೀಭೂತರು ಯಡಿಯೂರಪ್ಪನವರೇನೆ. ಏಕೆಂದರೆ ನಾನು ಮಹದಾಯಿ ಸಮಸ್ಯೆಯನ್ನು ಬಗೆ ಹರಿಸಿಯೇ ಬಿಡುತ್ತೇನೆ ಎನ್ನುವಂತಹ ಭಾಷಣಗಳಿಂದ ಅವರು ಈ ಸ್ಥಿತಿಯನ್ನು ತಂದುಕೊಂಡಿದ್ದಾರೆ. ಅಂದು ಸೋನಿಯಾ ಗಾಂಧಿ ಅಡ್ಡಗಾಲಾಕ್ಕಿದ್ರೆ ಈಗ ನಿರ್ಲಕ್ಷ್ಯ ತಾಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ…….! ಎಲ್ಲಿ ಅನ್ಯಾಯವಾಗ್ತಿದೆ ಎಂಬುದರ ಅರಿವಿದ್ದರು ಸುಮ್ಮನಿದ್ದ ನಾಯಕರು, 2018ರ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಮಸ್ಯೆ ಬಗೆಹರಿಸಲು ನಾ ಮುಂದು – ತಾ ಮುಂದು ಅಂತಾ ಬಾಯಿ-ಬಾಯಿ ಬಡಿದುಕೊಳ್ಳುತ್ತಿರೋದ್ಯಾಕೆ ಅನ್ನೋ ಸತ್ಯ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಗೊತ್ತಿದೆ. ಆದರೆ ಉತ್ತರ ಕೊಡೋಕೆ ಕಾಯ್ತಾ ಇದ್ದಾನೆ ಅನ್ನೋದಷ್ಟೇ ಇರೋ ವಾಸ್ತವ…..!

ಏಕೋ-ಏನೋ ನಮ್ಮ ನೆಲದ ರಾಜಕೀಯ ನಾಯಕರಿಗೆ ತಮ್ಮ ಜವಬ್ದಾರಿಯೇನೆಂಬುದನ್ನು ಅರಿತು ಅದನ್ನಾ ನೇರವೇರಿಸೋ ಬದಲು ಜವಬ್ದಾರಿಯನ್ನಾ ನಾಡಿನ ಸಮಸ್ಯೆಯನ್ನಾಗಿಸಿ, ಆ ಸಮಸ್ಯೆಯನ್ನಾ ಬಗೆಹರಿಸಲಾಗದ ಕಗ್ಗಂಟಾಗಿಸಿ, ಅದನ್ನ ಪರಿಹರಿಸೋ ಬದಲು ಮತ್ತಷ್ಟು ತೀರಾ ಬಗೆಹರಿಯದ ಸಮಸ್ಯೆಯನ್ನಾಗಿಸೋ ಅನುಭವವಿದೆಯೋ ಹೊರತು, ಅದು ಬಗೆಹರಿಸಲು ಆಗದಂತಹ ಸಂದಿಗ್ಧತೆಗೂ ಮುಂಚೆ ಪರಿಹರಿಸೋ ಜಾಣ್ಮೆ ತೋರುತ್ತಿಲ್ಲವೆಂಬ ಸತ್ಯದ ಜೊತೆಗೆ ಅಥವಾ ಸಾಮಾನ್ಯವಾಗಿ ಬಗೆಹರಿಯೋ ಸಮಸ್ಯೆಗಳಲ್ಲೂ ತಮ್ಮ ಕೀಳು ಮಟ್ಟದ ರಾಜಕೀಯ ಬೆರೆಸಿ ಆ ನಂತರ ಆ ಸಮಸ್ಯೆಯನ್ನು ಅಂತರ್ ರಾಜ್ಯ ಸಮಸ್ಯೆಗಳನ್ನಾಗಿಸಿ ದಶಕ-ದಶಕಗಳ ಕಾಲ ಅಳೆದು-ತೂಗಿ, ಎಳೆದು-ಜಗಿದು ರಾಜ್ಯದ ಜನತೆಯನ್ನು ಆತಂಕಕ್ಕೀಡು ಮಾಡುವುದರಲ್ಲಿ ಅದೆಂತಹ ಸಂತೋಷ ಸಿಗುತ್ತೋ ಗೊತ್ತಿಲ್ಲ. ಆದರೆ ನೆಲದ ಸಮಸ್ಯೆಗಳಾದ ಕಾವೇರಿ, ಕೃಷ್ಣ, ಮಹಾದಾಯಿ, ಕಳಸಾ-ಬಂಡೂರಿ ಜಲ ವಿವಾದಗಳು, ಬೆಳಗಾವಿ ಗಡಿ ವಿವಾದ, ಕೋಲಾರ-ಚಿಕ್ಕ ಬಳ್ಳಾಪುರ ಜನತೆಯ ಕುಡಿಯೋ ನೀರಿನ ವಿವಾದಗಳಲ್ಲದೇ ಇನ್ನು ಹತ್ತು ಹಲವಾರು ವಿವಾದಗಳು ಈ ತರಹದ ಕಗ್ಗಂಟಾಗಿ ಪರಿವರ್ತನೆಗೊಂಡು ಬಗೆಹರಿಯದ ಸಮಸ್ಯೆಗಳಾಗಲು ಕಾರಣ ನಮ್ಮ ನೆಲದ ರಾಜಕೀಯ ನಾಯಕರ ಇಚ್ಚಾ ಶಕ್ತಿಯ ಕೊರತೆ ಮತ್ತು ಬೇಜವಬ್ದಾರಿ ಹಾಗೂ ಕೀಳು ರಾಜಕೀಯದ ನಿಲುವುಗಳೇ ನೇರ ಕಾರಣ ಅನ್ನೋದಂತೂ ಸುಳ್ಳಲ್ಲ…..

ಮಹಾದಾಯಿ ಇತಿಹಾಸ:

ಇಂತಹ ಸಂದರ್ಭದಲ್ಲಿ ಮಹಾದಾಯಿ ನದಿ ಹರಿವಿನ ಬಗ್ಗೆ ಹೇಳೋದಾದರೆ ಮಹಾದಾಯಿ ನದಿ ಕರ್ನಾಟಕದ ಬೆಳಗಾವಿಯ ದೇವಗಾವಂ ಎಂಬಲ್ಲಿ ಹುಟ್ಟಿ, ರಾಜ್ಯದ ವ್ಯಾಪ್ತಿಯಲ್ಲಿ ತನ್ನ 35 ಕಿ.ಮೀಟರ್, ಮಹಾರಾಷ್ಟ್ರದಲ್ಲಿ 3 ಕಿ.ಮೀಟರ್, ಮತ್ತು ಕೊನೆಯದಾಗಿ ಗೋವಾದಲ್ಲಿ 83ಕಿ.ಮೀಟರ್ ಹರಿದು ನಂತರದಲ್ಲಿ ಅರಬ್ಬೀ ಸಮುದ್ರಕ್ಕೆ ಸೇರುತ್ತದೆ. ಆದರೆ ತನ್ನ ಇಡೀ ನದಿ ಹರಿವಿನ ನೀರಿನ ಪಾಲಿನಲ್ಲಿ ಕರ್ನಾಟಕದ ಪಾಲು ಸರಿ-ಸುಮಾರು 40 ಟಿ.ಎಂ.ಸಿ. ಆದರೆ ಸದ್ಯಕ್ಕೆ ತನ್ನ ಪಾಲಿನ 40 ಟಿ.ಎಂ.ಸಿ. ನೀರಿನಲ್ಲಿ ಕರ್ನಾಟಕ ಸರ್ಕಾರದ ಸದ್ಯದ ಬೇಡಿಕೆ ಮತ್ತು ಆ ಬೇಡಿಕೆಯ ಉದ್ಧೇಶ ಉತ್ತರ ಕರ್ನಾಟಕ ಭಾಗದ ಜನರ ಕುಡಿಯೋ ನೀರಿನ ಬೇಡಿಕೆಗಾಗಿ ಬೇಕಿರೋ ಕೇವಲ 7.5 ಟಿ.ಎಂ.ಸಿ. ನೀರಿಗಾಗಿ ಮಾತ್ರ. ಆದರೆ ಹಕ್ಕಿನ ವಿಷಯದಲ್ಲಲ್ಲದಿದ್ದರೂ ಮಾನವೀಯತೆಯ ದೃಷ್ಠಿಯಿಂದಲಾದರೂ ಕರ್ನಾಟಕದ ಪಾಲಿನ 7.5 ಟಿ.ಎಂ.ಸಿ. ನೀರಿನ ಬೇಡಿಕೆಯನ್ನಾ ಮನ್ನಿಸಿಯಾದರೂ ನೀರು ಬಿಡಬೇಕಾದ ಗೋವಾ ರಾಜ್ಯ ಸರ್ಕಾರ ನೀರು ಬಿಡದೇ ಮೊಂಡಾಟವಾಡ್ತ ಇದ್ರೆ, ಅತ್ತ ಕೇಂದ್ರ ಸರ್ಕಾರ ಚುನಾವಣೆಯ ತಾಲೀಮಿಗಾಗಿ ಈ ವಿವಾದವನ್ನಾ ಕೆದಕಿ ಮತ್ತಷ್ಟು ಕಗ್ಗಂಟಾಗಿಸುತ್ತಾ ಕಾಲ ಕಳೆಯುತ್ತಿರೋದು ನಿಜಕ್ಕೂ ಹೇಸಿಗೆ ಹುಟ್ಟಿಸುವಂತಿದೆ.
ಪಶ್ಚಿಮಾಭಿಮುಖವಾಗಿ ಹರಿಯೋ ಮಹಾದಾಯಿ ನದಿಗೆ ನಮ್ಮ ನೆಲದಲ್ಲೇ ಹುಟ್ಟಿ ನಮ್ಮ ನೆಲದಲ್ಲೇ ಮಹಾದಾಯಿ ಒಡಲು ಸೇರೋ ಮಳೆ ನೀರಿನ ಹಳ್ಳಗಳಾದ ಕಳಸಾ, ಹಳತಾರ, ಗುರ್ಕಿ, ಚೋರ್ಲಾ, ಬಂಡೂರಿ, ಪೋಟ್ಲಾ ಹಳ್ಳಗಳ ನೀರು ಕೂಡ ಮಹಾದಾಯಿ ಮೂಲಕ ಗೋವಾ ಪಾಲಾಗ್ತ ಇದೆ. ಹೀಗೆ ನಮ್ಮ ರಾಜ್ಯದ ಮಹಾದಾಯಿ ಕಣಿವೆಯಲ್ಲೇ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಮಹಾದಾಯಿ ನದಿ ಸೇರಿ ಕೊನೆಗೆ ಗೋವಾ ಪಾಲಾಗುತ್ತಿರೋ ನೀರನ್ನು ಪೂರ್ವಭಿಮುಖವಾಗಿ ಹರಿಯೋ ಮಲಪ್ರಭಾ ನದಿಗೆ ಸೇರಿಸೋ ಮೂಲಕ ನವಿಲು ತೀರ್ಥ (ರೇಣುಕಾ ಸಾಗರ) ಜಲಾಶಯದ 17 ಟಿ.ಎಂ.ಸಿ. ನೀರಿನ ಕೊರತೆಯನ್ನು ನೀಗಿಸಿಕೊಳ್ಳದೇ ಎಡವಿದ ನಮ್ಮ ರಾಜ್ಯ ಸರ್ಕಾರಗಳು ತಮ್ಮ ತಪ್ಪು ನಿರ್ಧಾರದಿಂದಾಗಿ ನದಿ ತಿರುವಿಗೂ ಮತ್ತು ನದಿ ಕಣಿವೆಯ (ಹಳ್ಳಗಳ) ತಿರುವುಗಳ ವ್ಯತ್ಯಾಸವನ್ನೇ ಹರಿಯದೇ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾಡಿದ ಯಡವಟ್ಟು ಇಂದು ಬಗೆಹರಿಸಲಾಗದ ಸಮಸ್ಯೆಯಾಗಿ ಬದಲಾಗಿರೋದಂತೂ ಸುಳ್ಳಲ್ಲ…..

ಮಲಪ್ರಭೆಗೂ – ಮಹಾದಾಯಿಗೂ ಇರೋ ಸಂಬಂಧವೇನೂ….?

ಮಲಪ್ರಭಾ & ಮಹಾದಾಯಿ ನದಿಗಳೆರಡು ನಮ್ಮ ರಾಜ್ಯದಲ್ಲಿ ಹುಟ್ಟೋ ಎರಡು ಪ್ರಮುಖ ನೀರಿನ ಮೂಲಗಳು. ಇಂತಹ ನದಿ ನೀರಿನ ಮೂಲವಾದ ಮಲಪ್ರಭಾ ನದಿಗೆ 1972ರಲ್ಲಿ ಅಡ್ಡವಾಗಿ ಕಟ್ಟಿದ ನವಿಲು ತೀರ್ಥ ಜಲಾಶಯ ( ರೇಣುಕಾ ಸಾಗರ) ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 37.70 ಟಿ.ಎಂ.ಸಿ. ಹಾಗೂ ಇದರ ಉದ್ಧೇಶ ಆ ಭಾಗದ 5.27 ಲಕ್ಷ ಎಕರೆಗೆ ನೀರುಣಿಸೋ ಉದ್ದೇಶ ಆದ್ರೆ ಆ ಪ್ರದೇಶ ಮೊದಲೇ ಬರಪೀಡಿತ ಪ್ರದೇಶವಾದ ಹಿನ್ನೆಲೆಯಲ್ಲಿ ಅದು ತುಂಬಿರೋದು ಕೇವಲ 3 ಬಾರಿಯಷ್ಟೇ…! ಅಲ್ಲದೇ ಮಲಪ್ರಭೆ ನದಿ ಕಣಿವೆಯಲ್ಲಿ ದೊರಕುತ್ತಿರೋ ನೀರಿನ ಪ್ರಮಾಣ ಕೇವಲ 20 ಟಿ.ಎಂ.ಸಿಯಷ್ಟೇ. ಹಾಗಾಗಿ ಬಾಕಿಯುಳಿಯೋ 17 ಟಿ.ಎಂ.ಸಿ. ನೀರನ್ನು ಮಹಾದಾಯಿ ನದಿ ತಿರುವಿನ ಮೂಲಕ ಪಡೆಯೋ ಉದ್ಧೇಶಿತ ಯೋಜನೆಯ ಮಹಾದಾಯಿ ನದಿ ತಿರುವು ಯೋಜನೆ……!

ಜನತೆಯ ಒಳಿತಿಗಾಗಿ ಕೈಗೊಂಡ ಈ ಯೋಜನೆ ಕಗ್ಗಂಟಾಗೋಕೆ ಕಾರಣ ನಮ್ಮವರ ಇಚ್ಛಾಶಕ್ತಿಯ ಕೊರತೆಯೇ ನೇರ ಕಾರಣ. ಅದೇನೆಂದರೆ ಮಲಪ್ರಭೆಗೆ ಅಡ್ಡಲಾಗಿ ನಿರ್ಮಿಸಿರೋ ರೇಣುಕಾ ಸಾಗರ ಜಲಾಶಯ ಎದುರಿಸುತ್ತಿರೋ 17 ಟಿ.ಎಂ.ಸಿ. ನೀರಿನ ಕೊರತೆಯನ್ನು ಕರ್ನಾಟಕದ ಕೋಟ್ನಿ ಮತ್ತು ಗೋವಾದ ಗಡಿ ಭಾಗ ಸುರಗ್ ಎಂಬಲ್ಲಿ ಎರಡು ಜಲಾಶಯ ನಿರ್ಮಿಸಿ ಅದರಲ್ಲಿ 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಆ ವಿದ್ಯುತ್ ಅನ್ನು ಗೋವಾಕ್ಕೂ – ನೀರನ್ನು ಮಲಪ್ರಭೆಗೆ ಜೋಡಿಸೋ ಮೂಲಕ ಬಾಕಿ 17 ಟಿ.ಎಂ.ಸಿ ನೀರಿನಲ್ಲಿ ಬರವನ್ನು ನೀಗಿಸೋ ಕಾರ್ಯಕ್ಕೆ ಕೈ ಹಾಕೋ ಬದಲು, ಮಹಾದಾಯಿ ಕಣಿವೆಯ ಹಳ್ಳಗಳಿಗೆ ಅಡ್ಡಲಾಗಿ ಅಣೆಕಟ್ಟಿ ನಿರ್ಮಿಸಿ ಆ ಮೂಲಕ ನವಲಗುಂದ – ನರಗುಂದ & ರೋಣಾ ಭಾಗದ ಜನರ ನೀರಿನ ಬವಣೆಯನ್ನು ನೀಗಿಸೋ ಜಾಣ್ಮೇ ತೋರದೇ ಇದ್ದದ್ದು, ಜೊತೆಗೆ, ನಮ್ಮ ನೆಲದ ಹಳ್ಳದ ನೀರಿಗೂ ಕೇಂದ್ರದ ನ್ಯಾಯಾಧೀಕರಣದ ಮುಂದೆ ಮಂಡಿಯೂರಿ ಕುಳಿತ್ತಿರೋದು ಮಾತ್ರ ವಿಪರ್ಯಾಸ. ಏಕೆಂದರೆ ನಮ್ಮಲ್ಲಿನ ಕಳಸಾ-ಬಂಡೂರಿ ನದಿಗಳೇಗೋ ಹಾಗೇ ಮಹಾರಾಷ್ಟ್ರದ ಮಹಾದಾಯಿ ಕಣಿವೆಯಲ್ಲಿ ಹುಟ್ಟಿ ಮಹಾದಾಯಿ ಒಡಲು ಸೇರೋ ವಿರಧಿ ನದಿಯೂ ಹೌದು. ಆದರೆ ಇಲ್ಲಿ ನಮ್ಮ ರಾಜ್ಯ ಸರ್ಕಾರ ನಮ್ಮ ಹಕ್ಕಿನ ನೀರಿಗೂ ಬೇರೆ ರಾಜ್ಯದ ಮುಂದೆ ಮಂಡಿಯೂರಿ ಕುಳಿತ್ತಿದ್ದರೆ ಅದೇ ಮಹಾರಾಷ್ಟ್ರ ರಾಜ್ಯ ಮಾತ್ರ ತನ್ನ ವಿರಧಿ ನದಿ ನೀರು ಮಹಾದಾಯಿ ಒಡಲು ಸೇರದಂತೆ ತಡೆಯೊಡ್ಡಿ ತನ್ನ ನೆಲದ ಜನರ ಕುಡಿಯೋ ನೀರಿನ ಉದ್ಧೇಶವಲ್ಲದೇ, ನೀರಾವರಿ ಉದ್ಧೇಶಕ್ಕೂ ಬಳಸಿಕೊಂಡು ತನ್ನ ನೆಲದ ಜನಸಾಮಾನ್ಯರ ಹಿತಕಾಯ್ದುಕೊಂಡ ಉದಾಹರಣೆಗಳೇಕೆ ನಮ್ಮನಾಳೋರ ಮನಸ್ಸಿನಲ್ಲಿ ಗಂಭೀರತೆಯನ್ನು ಸೃಷ್ಠಿಸಿಲ್ಲ ಅನ್ನೋದೇ ನಾಚಿಕೆಗೇಡಿನ ಸಂಗತಿ…! ಏಕೆಂದರೆ ನಮ್ಮವರೂ ಗೋವಾದ ಮುಂದೆ ಭಿಕ್ಷೇ ಕೇಳುತ್ತಿರೋ 7.5 TMC ನೀರು ನಮ್ಮ ನೆಲದ ಉಪನದಿಗಳಾದ (ಹಳ್ಳಗಳಾದ) ಕಳಸಾ & ಬಂಡೂರಿ ಎರಡರಿಂದಲೇ ದೊರೆಯುತ್ತದೆ ಎಂಬುದೇ ನಗ್ನ ಸತ್ಯ….!

Edited By

Manjula M

Reported By

Manjula M

Comments