ಹಿಮಾಲಯ ಪರ್ವತವನ್ನೇರಿದ ಮೊದಲ ವಿಶೇಷ ಚೇತನ ಈ ಹೆಣ್ಣು..!ಯಾರು ಗೊತ್ತಾ..?

ಜೀವನದಲ್ಲಿ ಬರುವ ಸಣ್ಣ ಕಷ್ಟಗಳಿಗೆ ಹೆದರಿ ಹಿಂದೆ ಸರಿಯುವವರೆ ಹೆಚ್ಚು, ನಾನು ಕೂಡ ಸೋತು ನಿಂತಾಗ ಸ್ಪೂರ್ತಿಯಾದವಳು ಒಂದು ಹೆಣ್ಣು ಮಗಳು. ಸಂಸಾರದಲ್ಲಿ ಬರುವ ಚಿಕ್ಕ ತೊಂದರೆಗಳನ್ನೆ ದೊಡ್ಡದೆಂದು ಭಾವಿಸಿ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾವಿರಾರು ಹೆಣ್ಣು ಮಕ್ಕಳಿಗೆ ಧೈರ್ಯದಿಂದ ತಮ್ಮ ತೊಂದರೆಗಳನ್ನು ಹಿಮ್ಮೆಟ್ಟಿ ಮುನ್ನುಗ್ಗಲು ಈಕೆ ಮಾದರಿ!. ನನ್ನ ಜೀವನದ ದಿಕ್ಕನ್ನೇ ಬದಲಿಸಿದ ಈಕೆ ನನ್ನ ಸ್ಪೂರ್ತಿ.
ಉತ್ತರಪ್ರದೇಶದ ಹೆಣ್ಣಿವಳು, ರಾಷ್ಟ್ರೀಯ ಮಟ್ಟದ ವಾಲಿಬಾಲ್ ಕ್ರೀಡಾಪಟು. ಸಾಮಾನ್ಯವಾಗಿ ಕ್ರೀಡಾಪಟುಗಳಿಗೆ ಸಾಮಾನ್ಯ ಜನರಿಗಿಂತ ಹೆಚ್ಚು ಆತ್ಮವಿಶ್ವಾಸ, ಧೈರ್ಯ ಹಾಗೇಯೆ ಇವಳು. ಸಾಮಾನ್ಯರಲ್ಲಿ ಅಸಾಮಾನ್ಯಳಾದವಳು. ಒಮ್ಮೆ CISF ಪರೀಕ್ಷೆ ಬರೆಯಲು ಲಕ್ನೋ ದೆಹಲಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ದರೋಡೆಕೋರರ ಗುಂಪೊಂದು ರೈಲಿಗೆ ಮುತ್ತಿಗೆ ಹಾಕಿ, ಇವಳ ಬಳಿಯಿದ್ದ ಹಣ , ಚಿನ್ನ ಕಿತ್ತುಕೊಳ್ಳಲು ಯತ್ನಿಸುವ ಎಳೆದಾಟದಲ್ಲಿ ಆಕೆಯನ್ನು ರೈಲಿನಿಂದ ಆಚೆಗೆ ನೂಕಿದರು. ಚಲನೆಯಲ್ಲಿದ್ದ ರೈಲಿನಿಂದ ಬಿದ್ದಿದ್ದರಿಂದ ಕಾಲು ಪೆಟ್ಟಾಗಿ ಪಕ್ಕದ ಹಳಿಯಿಂದ ಹಾದುಹೋಗುವಷ್ಟರಲ್ಲಿ ಆಕೆಯ ಕಾಲಿನ ಮೇಲೆ ಮತ್ತೊಂದು ರೈಲು ಹಾದುಹೋಗಿತ್ತು, ಕಷ್ಟ ಪಟ್ಟು ಹಳಿಬಿಟ್ಟು ಪಕ್ಕಕ್ಕೆ ಕುಳಿತಳು ಕತ್ತಲೆಯ ಸಮಯ ಜನ ಯಾರು ಸಹಾಯಕ್ಕೆ ಬರುವವರಿರಲಿಲ್ಲ, ಹಳಿಯ ಪಕ್ಕದಲ್ಲಿ ಕುಳಿತ ಕಾರಣ ಹಳಿಯ ಮೇಲೆ ರೈಲು ಹೋದರೆ ರೈಲಿನಲ್ಲಿ ಜನರು ಮಾಡುವ ಗಲೀಜು ಮುಖದ ಮೇಲೆ ಬೀಳುತ್ತಿತ್ತು. ರೈಲು ಬರದಿದ್ದರೆ ಹಳಿಯ ಮೇಲೆ ಓಡಾಡುವ ಇಲಿ ಹೆಗ್ಗಣಗಳು ಕಾಲಿನಿಂದ ಸೋರುತ್ತಿದ್ದ ರಕ್ತವನ್ನು ಹೀರಿ ನರಕಯಾತನೆ ಪಡುವಂತೆ ಮಾಡುತ್ತಿದ್ದವು. ಬೆಳಗಿನ ಜಾವ ಸುತ್ತಲಿನ ಜನರ ಸಹಾಯದಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಳು. ರೈಲು ಕಾಲಿನ ಮೇಲೆ ಹರಿದಿದ್ದರಿಂದ ತನ್ನ ಒಂದು ಕಾಲನ್ನು ಸಂಪೂರ್ಣವಾಗಿ ಕಳೆದುಕೊಂಡಳು. ಆ ಕಾಲಿಗೆ ಬದಲಿ ಕೃತಕ ಕಾಲನ್ನು ಜೊಡಿಸಲಾಯಿತು. ಪೋಲಿಸ್ ವಿಚಾರಣೆಯ ವೇಳೆಯಲ್ಲಿ ಈಕೆ ತಾನೇ ಆತ್ಮಹತ್ಯೆಗೆ ಯತ್ನಿಸಿದಳು, ಹಳಿದಾಟುವಾಗ ಬಿದ್ದಳು ಹೀಗೆ ಹಲವಾರು ಸುಳ್ಳು ಹೇಳಿಕೆಯನ್ನು ಕೊಟ್ಟರು.
ಇಷ್ಟೆಲ್ಲಾ ಕಷ್ಟಗಳ ನಡುವೆಯು ಈಕೆ ಅಂದೆ ಏನನ್ನಾದರೂ ಸಾಧಿಸಿಯೇ ತೀರಬೇಕು ಎಂದು ದೃಡ ಸಂಕಲ್ಪತೊಟ್ಟಳು. ನಂತರ ಹಿಮಾಲಯ ಪರ್ವತವನ್ನು ಏರಿದ ಭಾರತದ ಮೊದಲ ಮಹಿಳೆಯಾದ ಬಚೇಂದ್ರಿ ಪಾಲ್ ಅವರೊಂದಿಗೆ ತನ್ನ ಹಿಮಾಲಯವನ್ನೇರುವ ಕನಸನ್ನು ಹಂಚಿಕೊಳ್ಳುತ್ತಾಳೆ. ಕಷ್ಟಕ್ಕೆ ಹೆದರಿ ಸೋಲುವ ಎಷ್ಟೊ ಹೆಣ್ಣು ಮಕ್ಕಳ ನಡುವೆ ಇವಳು ವಿಶಿಷ್ಟ ಅದರಲ್ಲೂ ಕಾಲಿಲ್ಲದಿದ್ದರು ಹಿಮಾಲಯವನ್ನು ಏರುವ ಕನಸೇ ಅದ್ಬುತ. ಸತತ ಆರು ತಿಂಗಳ ಪರಿಶ್ರಮದಿಂದ ಮತ್ತು ತನ್ನ ಅಣ್ಣ ಹಾಗೂ ಬಚೇಂದ್ರಿ ಪಾಲ್ ಅವರ ಮಾರ್ಗದರ್ಶನದಿಂದ ಹಿಮಾಲಯ ಪರ್ವತವನ್ನೇರಿದ ಮೊದಲ ವಿಶೇಷ ಚೇತನ(ಅಂಗವಿಕಲ) ಹೆಣ್ಣು ಮಗಳೆಂಬ ಹೆಗ್ಗಳಿಕೆ ಇವಳದು.ಈಗಾಗಲೆ ಪ್ರಪಂಚದ ಆರು ಎತ್ತರದ ಪರ್ವತ ಶ್ರೇಣಿಗಳನ್ನು ಏರಿರುವ ಕೀರ್ತಿ ಈ ಮಹಾನ್ ಸಾಧಕಿಯದು. ಈಕೆ ತನ್ನ ಯಶಸ್ಸನ್ನು ತನ್ನ ಸ್ಪೂರ್ತಿಯಾದ ಸ್ವಾಮಿ ವಿವೇಕಾನಂದರಿಗೆ ಸಮರ್ಪಿಸಿದ್ದಾಳೆ. ತನಗೆ ಸಿಕ್ಕ ಬಹುಮಾನಗಳ ಹಣವನ್ನು “ಶಹೀದ್ ಚಂದ್ರಶೇಖರ್ ವಿಕಲಾಂಗ್ ಆಕಾಡೆಮಿ” ಗೆ ಮೀಸಲಿಟ್ಟಿದ್ದಾಳೆ. “Born again on the Mountain “ಎಂಬ ಪುಸ್ತಕವನ್ನು ಬರೆದಿದ್ದಾರೆ. ಈಕೆಯ ಸಾಹಸಕ್ಕೆ ಸೇವೆಗೆ ಭಾರತ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಈ ಅದಮ್ಯ ಚೇತನ ಬೇರೆಯಾರು ಅಲ್ಲ ಹಿಮಾಲಯ ಪರ್ವತವನ್ನೇರಿದ ಮೊದಲ ವಿಶೇಷ ಚೇತನ ‘ಅರುಣಿಮಾ ಸಿನ್ಹಾ’
Comments