ರಾಜ್ಯದಲ್ಲಿಯೆ ಪ್ರಥಮ ಬಾರಿಗೆ ಸರ್ಕಾರದಿಂದ ಮನೆ ಕಟ್ಟುವವರಿಗೆ ಸಿಕ್ತು ಗುಡ್ ನ್ಯೂಸ್..!

ರಾಜ್ಯದಲ್ಲಿಯೇ ಮೊದಲ ಬಾರಿಗೆ ನಗರ ಪ್ರದೇಶಗಳಲ್ಲಿ ಗೃಹ ನಿರ್ಮಾಣ ಪ್ರಕ್ರಿಯೆ ಅತ್ಯಂತ ಸುಲಭಗೊಳಿಸಲು ಏಕಗವಾಕ್ಷಿ ಪದ್ಧತಿಯನ್ನು ಶೀಘ್ರವೇ ಜಾರಿಗೊಳಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಯುಟಿ ಖಾದರ್ ಅವರು, ನಗರ ಮಟ್ಟದಲ್ಲಿ ಕಟ್ಟಡ, ಲೇಔಟ್ ನಿರ್ಮಾಣಕ್ಕಾಗಿ ಜನರು ಅಲೆದಾಡುವುದನ್ನು ತಪ್ಪಿಸಲು ಏಕಗವಾಕ್ಷಿ ಪದ್ಧತಿಯು ನೆರವಾಗಲಿದೆ. ಕಟ್ಟಡ ನಿರ್ಮಾಣ ಮಾಡಲು ಜನರು 14 ವಿವಿಧ ಇಲಾಖೆಗಳಿಗೆ ಅಲೆದಾಡಬೇಕಿತ್ತು. ಇದರಿಂದ ಸಾಕಷ್ಟು ತೊಂದರೆಗಳು ಆಗುತ್ತಿದ್ದವು. ಆದರೆ ಇದೀಗ ಇದನ್ನು ತಪ್ಪಿಸಲು ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದರು. 30 - 40 ಅಳತೆಯ ಮನೆ ಕಟ್ಟಲು ಅರ್ಜಿ ಹಾಕಿದರೆ ತಕ್ಷಣವೇ ಲೈಸೆನ್ಸ್ ಸಿಗಲಿದೆ. ಇನ್ನೂ 60 - 40 ಅಳತೆಗೂ ಇದೇ ನಿಯಮಗಳು ಅನ್ವಯವಾಗಲಿವೆ. ಕಟ್ಟಡ ನಿರ್ಮಾಣ ಕಾಯ್ದೆಗೆ ತಕ್ಕಂತೆ ಎಲ್ಲ ನಿಯಮಗಳನ್ನು ಪಾಲಿಸಿ ಆನ್‌ಲೈನ್‌ನಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು. ಇದೇ ಅರ್ಜಿಯನ್ನು ಅದೇ ಸಮಯಕ್ಕೆ ಉಳಿದ 14 ಇಲಾಖೆಗಳಿಗೂ ಕೂಡ ಕಳುಹಿಸಲಾಗುತ್ತದೆ. ಏಳು ದಿನಗಳ ಒಳಗೆ ಆಯಾ ಇಲಾಖೆಯವರು ತೀರ್ಮಾನವನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
Comments