ಐದೇ ದಿನದಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಏರಿದ ಮಹಿಳೆ ಬಗ್ಗೆ ನಿಮಗೆಷ್ಟು ಗೊತ್ತು..?

ಅತ್ಯಂತ ಎತ್ತರದ ಪರ್ವತ ಯಾವುದು ಎಂದರೆ ನೆನಪಾಗೋದು ಮೌಂಟ್ ಎವರೆಸ್ಟ್. ವಿಶ್ವದ ಅತ್ಯಂತ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಬಗ್ಗೆ ವಿಶ್ವದ ಜನತೆಗೆ ಸಾಕಷ್ಟು ಕುತೂಹಲವಿದೆ. ಸಾಗರ ಮಟ್ಟದಿಂದ 29,035 ಅಡಿ ಎತ್ತರವಿರುವ ಅತಿ ಎತ್ತರದ ಶಿಖರ.
ಮೂಳೆ ಕೊರೆಯುವ ಚಳಿ, ಆಳ ಅಳೆಯಲಾಗದ ಹಿಮದ ಪದರ, ಆಮ್ಲಜನಕದ ತೊಂದರೆ ಇತ್ಯಾದಿ ಹತ್ತು ಹಲವು ತೊಂದರೆಗಳನ್ನು ಎದುರಿಸಿ ಪರ್ವತಾರೋಹಿಗಳು ಇದರ ನೆತ್ತಿಯನ್ನು ಏರಲು ಪ್ರಯತ್ನಿಸುತ್ತಲೇ ಇದ್ದಾರೆ. ಜಗತ್ತಿನ ಬಹುತೇಕ ಮಂದಿ ತಾನೂ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲವುಳ್ಳವರಾಗಿರುತ್ತಾರೆ. ಆದರೆ ಅದರಲ್ಲಿ ಗೆಲವು ಸಾಧಿಸಿದವರು ಕೆಲವೇ ಕೆಲವು ಮಂದಿಯಾದರೆ ಸೋತವರ ಸಂಖ್ಯೆ ಅಂದಾಜು ಮಾಡುವುದು ಅಸಾಧ್ಯದ ಮಾತು. ಜಗತ್ತಿನ ಅತಿ ದೊಡ್ಡ ಪರ್ವತಗಳಲ್ಲಿ ಒಂದಾದ ಮೌಂಟ್ ಎವರೆಸ್ಟ್ ಶಿಖರ ಏರಿ ಸಾಧನೆ ಮಾಡಿದವರು ಅನೇಕ ಮಂದಿ ಇದ್ದಾರೆ. ಆದ್ರೆ ಹಿಮಾಲದ ಶಿಖರ ಶ್ರೇಣಿಯಲ್ಲಿರುವ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್‍ನ್ನು ಮೊಟ್ಟ ಮೊದಲ ಬಾರಿಗೆ ಏರಿದ್ದು ತೇನ್ ಇಂಗ್ ನೋರ್ಗೆ ಮತ್ತು ಎಡ್ಮಂಡ್ ಹಿಲರಿ. ಅನಂತರ ನೂರಾರು ಮಂದಿ ಶಿಖರ ಏರಿ ವಿಭಿನ್ನ ರೀತಿಯಲ್ಲಿ ದಾಖಲೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಸೇರ್ಪಡೆಯಾಗಿರೋದು ಅರುಣಾಚಲ ಪ್ರದೇಶದ ಮಹಿಳೆ ಅಂಶು ಜಾಮ್ಸ್‍ಪ್ಪಾ ಅವರದ್ದು. ಹೌದು ಈಕೆ ಐದು ದಿನಗಳಲ್ಲಿ ಎರಡು ಬಾರಿ ಪರ್ವತ ಹತ್ತಿದ ಮಹಿಳೆ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ.
ವಾಸ್ತವವಾಗಿ ಒಂದು ಬಾರಿ ಈ ಬೃಹತ್ ಪರ್ವತವನ್ನು ಏರಿಳಿಯುವುದೇ ಕೆಲವರ ಇಡೀ ಜೀವನದ ಸಾಧನೆಯಾಗಿರುತ್ತದೆ. ಯಾಕಂದ್ರೆ ಈ ಪರ್ವತ ಹಾದಿ ಅಷ್ಟು ಕ್ಲಿಷ್ಟಕರವಾಗಿರುತ್ತದೆ. ಇಂತಹ ಸಂದರ್ಭದಲ್ಲು 2 ಮಕ್ಕಳಿರುವ 32 ವರ್ಷದ ಅಂಶು 5 ದಿನದಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಏರಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಅಂಶು ಜಾಮ್ಸ್‍ಪ್ಪಾ ಮೌಂಟ್ ಎವರೆಸ್ಟ್ ಅನ್ನು 5 ದಿನಗಳ ಅಂತರದಲ್ಲಿ 2 ಬಾರಿ ಏರಿ ದಾಖಲೆ ಮಾಡಿದ ವೀರ ವನಿತೆ. ಬರೋಬ್ಬರಿ 8848 ಮೀಟರ್ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್‍ನ್ನು ಮೇ 16 ರಂದು ಮೊದಲ ಬಾರಿಗೆ ಏರಿದ್ದರು. ಏನಾದರು ಮಾಡುವ ಹಂಬಲ, ವಿಶ್ವದಾಖಲೆ ನಿರ್ಮಿಸುವ ಕನಸು ಇತ್ತು.. ಒಮ್ಮೆ ಹತ್ತಿದ ಮೇಲೆ ಸಾಧನೆಯ ಕನಸು ಮತ್ತೆ ದೊಡ್ಡದಾಗಿತ್ತು. ಮೇ 20 ರಂದು ಬೆಳಿಗ್ಗೆ ಹತ್ತಲು ಆರಂಭಿಸಿ ಮೇ 21 ರಂದು ಪೂರ್ಣಗೊಳಿಸುವ ಮೂಲಕ ಕನಸ್ಸನ್ನು ನನಸಾಗಿಸಿಕೊಂಡು ಕಡೆಗೂ ಗಿನ್ನೆಸ್ ದಾಖಲೆಯ ಪುಟ ಸೇರಿದ್ದಾರೆ. ಐದೇ ದಿನದ ಅವಧಿಯಲ್ಲಿ ಎರಡು ಬಾರಿ ಎವರೆಸ್ಟ್ ಏರಿದ ಮೊಟ್ಟ ಮೊದಲ ಮಹಿಳೆ ಎಂಬ ವಿಶ್ವದಾಖಲೆ ಬರೆದಿದ್ದಾರೆ. ಅಲ್ಲದೆ ಐದು ಬಾರಿ ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Comments