ಮಳೆಯ ರೌದ್ರಾವತಾರಕ್ಕೆ 13 ಬಲಿ
ತಿರುವನಂತಪುರಂ: ಕೇರಳದ ವಿವಿಧಡೆ ಸುರಿಯುತ್ತಿರುವ ಬಿರುಗಾಳಿ ಸಹಿತ ಭಾರೀ ಮಳೆಗೆ 13 ಜನರು ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಿಂದ ಕೇರಳದ ಕೋಯಿಕ್ಕೋಡ್ ಇಡುಕ್ಕಿ, ಮತ್ತು ಕಣ್ಣೂರಿನಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದೆ.
ಮಳೆಯು ಪ್ರಾಣ ಹಾನಿಯ ಜೊತೆ ಜೊತೆಗೆ ಆಸ್ತಿ-ಪಾಸ್ತಿಗೂ ವಿಪರೀತ ಹಾನಿಯನ್ನುಂಟುಮಾಡಿದೆ. ಪ್ರಮುಖವಾಗಿ ಕೇರಳದ ಕೋಯಿಕ್ಕೋಡ್, ಇಡುಕ್ಕಿ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಬೆಳೆಯ ನಷ್ಟದ ಜೊತೆಗೆ ಮನೆಗಳಿಗೂ ಹಾನಿಯಾಗಿದೆ. ಬೆಳೆದ ಬೆಳೆಗಳು ಭಾರೀ ಪ್ರಮಾಣದ ಮಳೆಗೆ ಕೊಚ್ಚಿಕೊಂಡು ಹೋಗಿದ ಕಾರಣ ರೈತರು ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಿದ್ದಾರೆ.
ನೀರು ಎಲ್ಲೆಲ್ಲೂ ತುಂಬಿ ಹರಿಯುತ್ತಿರುವ ಕಾರಣ ಹೆಚ್ಚು ಜನರು ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ ಎಂದು ಹವಾಮಾನ ನಿರ್ವಹಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಮರಬಿದ್ದು, ಮನೆ ಬಿದ್ದು ಜೊತೆಗೆ ವಿದ್ಯುತ್ ತಂತಿ ತಗುಲಿಯೂ ಕೆಲವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಕೇರಳದ ಕರಾವಳಿ ಭಾಗದಲ್ಲಿ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಮುನ್ನೆಚ್ಚರಿಕೆಯನ್ನೂ ನೀಡಿದೆ.
Comments