ರೈತರ ಸಾಲಮನ್ನಾ ಕುರಿತು ಎಚ್'ಡಿಕೆ ತೆಗೆದುಕೊಂಡ ಮಹತ್ವದ ನಿರ್ಧಾರ...!!

29 May 2018 10:49 AM | General
24623 Report

ರೈತರ ಕೃಷಿ ಸಾಲಮನ್ನಾ ಕುರಿತಂತೆ ಪ್ರತಿಭಟನೆ, ಗೊಂದಲ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬುಧವಾರ (ಮೇ 30) ಸಾಲ ಮನ್ನಾ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ, ಯಾವ ಪ್ರಮಾಣದಲ್ಲಿ ರೈತರಿಗೆ ಸಾಲಮನ್ನಾದ ಅನುಕೂಲ ಆಗಲಿದೆ ಎಂಬ ಕುತೂಹಲವು ಎಲ್ಲರಲ್ಲಿ ಮೂಡಿದೆ. ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಾವು ಮುಖ್ಯಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಪ್ರಧಾನಿ ಮೋದಿಯವರನ್ನು ಭೇಟಿಯಾದರು.

ಸೋಮವಾರ ಬೆಳಿಗ್ಗೆ ನವದೆಹಲಿಗೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಸಂಜೆ ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಮೋದಿ ನಿವಾಸದಲ್ಲಿ ಪ್ರಧಾನಿಗಳ ಭೇಟಿ ಮಾಡಿ ಮಹದಾಯಿ, ಕಾವೇರಿ ಹಾಗೂ ಸಾಲ ಮನ್ನಾ ವಿಚಾರ ಕುರಿತು ಚರ್ಚಿಸಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಳಿಕ ಈ ಬಗ್ಗೆ ಮುನ್ಸೂಚನೆ ನೀಡಿರುವ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ, ರೈತರ ಸಾಲಮನ್ನಾ ಸಾಧ್ಯವಿಲ್ಲ ಎಂದು ನಾನು ಹೇಳಿಲ್ಲ. ಸ್ವಲ್ಪ ಸಮಯಾವಕಾಶ ಕೊಡಿ ಎಂದು ಕೇಳಿದ್ದೆ. ನಾನೇನೂ ಸುಮ್ಮನೆ ಕುಳಿತಿಲ್ಲ. ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದ್ದು, ಬುಧವಾರ ಬೆಂಗಳೂರಿನಲ್ಲಿ ಈ ಕುರಿತು ಜನರ ಮುಂದೆ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರೈತರ ಸಾಲ ಮನ್ನಾ ಮಾತ್ರವಲ್ಲದೆ, ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ಸಂಬಂಧ ಬುಧವಾರ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು. ಈ ವಿಚಾರದಲ್ಲಿ ಯಾರೂ ಆತಂಕ ಪಡಬೇಕಿಲ್ಲ ಎಂದರು. ನಿನ್ನೆ ನಾಲ್ಕು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ. ಆ ಕುಟುಂಬಗಳನ್ನು ಉಳಿಸುವವರು ಯಾರು ಎಂದು ಪ್ರಶ್ನಿಸಿದ ಅವರು, ಬುಧವಾರ ಇವೆಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

ರೈತರ ವಿಚಾರದಲ್ಲಿ ಸುಮ್ಮನೆ ಕೂರಲು ನಾನು ಯಡಿಯೂರಪ್ಪ ಅಲ್ಲ.ಕೇವಲ ರೈತರ ಸಾಲ ಮನ್ನಾ ಅಷ್ಟೇ ಅಲ್ಲ, ಹಲವಾರು ಸಮಸ್ಯೆಗಳಿಗೂ ಪರಿಹಾರ ಕಂಡು ಕೊಳ್ಳಬೇಕಿದೆ. ನಾನು ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿರುತ್ತೇನೆಯೋ ಅಲ್ಲಿಯವರೆಗೆ ಇದು ಸಮ್ಮಿಶ್ರ ಸರಕಾರವಾಗಿದ್ದರೂ ಜನಸ್ನೇಹಿ ಸರಕಾರವಾಗಿರಲಿದೆ. ಯಾರೂ ಆತಂಕ, ಅನುಮಾನಕ್ಕೆ ಒಳಗಾಗುವ ಅಗತ್ಯವಿಲ್ಲ. ರಾಜ್ಯದಲ್ಲಿ ಪರಿಣಾಮಕಾರಿ ಆಡಳಿತ ನಡೆಸಲು ಪ್ರತಿಕ್ಷಣ ಶ್ರಮಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು. ರಾಜ್ಯದ ಜನತೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ನಾನು, ಜನತೆ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ. ಆ ಬದ್ಧತೆ ನನಗೆ ಇದೆ. ಈ ಬಗ್ಗೆ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ನಾನು ರಾಜಕಾರಣದಲ್ಲೇ ಇರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ರಾಜ್ಯಕ್ಕೆ ಕೇಂದ್ರ ಸರ್ಕಾರದ ಬೆಂಬಲ ನೀಡಬೇಕೆಂದು ಪ್ರಧಾನಿಗಳನ್ನು ಕೋರಿದ್ದಾಗಿ ಕುಮಾರಸ್ವಾಮಿ ಹೇಳಿದ್ದು ಮಹದಾಯಿ ವಿವಾದ ಸಂಬಂಧ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲು ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾಗಿ ತಿಳಿಸಿದರು. ರಾಜ್ಯದ ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಿಲಿನ ಅಗತ್ಯವಿದೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯಕ್ಕೆ ತಕ್ಕ ಕಲ್ಲಿದ್ದಲು ಪೂರೈಸುವಂತೆ ಪ್ರಧಾನಿಗಳಲ್ಲಿ ಮನವಿ ಮಾಡಿದ್ದೇನೆ ಎಂದರು. ರಾಜ್ಯದಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿದ ಕೃಷಿ ಸಾಲದ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಶುಕ್ರವಾರವೇ ಆರ್ಥಿಕ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಸಾಲ ಮನ್ನಾ ಮಾಡಲು ಎಷ್ಟು ಹೊರೆ ಬೀಳುತ್ತದೆ ಎಂಬ ಬಗ್ಗೆಯೂ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಿದ್ದರು. ಸದ್ಯ ಸುಮಾರು 53 ಸಾವಿರ ಕೋಟಿ ರೂ. ಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಅಧಿಕಾರಿಗಳು ಮತ್ತು ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗದಂತೆ ಹೇಗೆ ಸಾಲ ಮನ್ನಾ ಮಾಡಬೇಕು ಎಂಬುದರ ಕುರಿತು ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದ್ದಾರೆ. ಅದರಂತೆ ಬುಧವಾರ ಸಾಲ ಮನ್ನಾ ಬಗ್ಗೆ ಸರ್ಕಾರದ ನಿರ್ಧಾರವನ್ನು ಘೋಷಣೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ತಿಳಿಸಿವೆ.

Edited By

Shruthi G

Reported By

Shruthi G

Comments