ದ್ವಿತೀಯ ಪಿಯುಸಿ: ಉತ್ತರ ಪತ್ರಿಕೆ, ಸ್ಕ್ಯಾನಿಂಗ್ ಗೆ 7 ಸಾವಿರ ಅರ್ಜಿ ಆಹ್ವಾನ

ದ್ವಿತೀಯ ಪಿಯುಸಿ ಫಲಿತಾಂಶ ಹೊರಬಂದು ಇನ್ನು ಕೇವಲ ಎರಡು ದಿನಗಳು ಕಳೆದಿವೆ. ಅಷ್ಟರಲ್ಲೇ ಸ್ಕ್ಯಾನಿಂಗ್ ಪ್ರತಿ ಹಾಗೂ ಮರುಮೌಲ್ಯ ಮಾಪನಕ್ಕಾಗಿ ಪದವಿಪೂರ್ವ ಶಿಕ್ಷಣ ಇಲಾಖೆಗೆ ಆನ್‌ಲೈನ್‌ನಲ್ಲಿ ಏಳು ಸಾವಿರ ಅರ್ಜಿಗಳು ಬಂದಿವೆಯಂತೆ.
ಇದೇ ಮೊದಲ ಬಾರಿಗೆ ಸ್ಕ್ಯಾನಿಂಗ್ ಪ್ರತಿ ಹಾಗೂ ಮರುಮೌಲ್ಯಮಾಪನ ಶುಲ್ಕದ ಆನ್‌ಲೈನ್ ಪಾವತಿಗೆ ಶಿಕ್ಷಣ ಇಲಾಖೆಯು ಅವಕಾಶ ಕಲ್ಪಿಸಿರುವುದರಿಂದ ಮೇ 1ರಂದು ಸರ್ಕಾರಿ ರಜೆ ದಿನವಾಗಿದ್ದರೂ 7 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಈ ವರೆಗೆ ಏಳು ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಸುಮಾರು ಎರಡು ಸಾವಿರ ಅರ್ಜಿಗಳ ಶುಲ್ಕವನ್ನು ಈಗಾಗಲೇ ಸ್ವೀಕರಿಸಲಾಗಿದೆ. ಉಳಿದ ಅರ್ಜಿಗಳ ಶುಲ್ಕ ಪಾವತಿಯಾಗಬೇಕಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸ್ವೀಕರಿಸಲು ಮೇ 7 ಕೊನೆಯ ದಿನವಾಗಿದೆ. ಸ್ಕ್ಯಾನಿಂಗ್ ಪ್ರತಿಯನ್ನು ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಶುಲ್ಕ ನಿಗದಿಪಡಿಸಲಾಗಿದೆ. ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 14 ಕೊನೆಯ ದಿನವಾಗಿದೆ. ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1670 ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ನಡುವೆ ಫಲಿತಾಂಶ ತಡೆಹಿಡಿದಂತಹ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ಕಚೇರಿಗೆ ಓಡಾಡುತ್ತಿದ್ದಾರೆ.
.
Comments