ನೀವು ನಿವೃತ್ತ ಸರ್ಕಾರಿ ನೌಕರರಾ? ಸಿಕ್ತು ಅನ್ಕೊಳ್ಳಿ ಬಂಪರ್ ಪಿಂಚಣಿ..!

ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ ಆರನೇ ರಾಜ್ಯ ವೇತನ ಆಯೋಗ ನೀಡಿದ ಶಿಫಾರಸಿನ ಅನ್ವಯವಾಗಿ ಸರ್ಕಾರ ಬುಧವಾರ ಆದೇಶವನ್ನು ಹೊರಡಿಸಿದೆ.
ಸರ್ಕಾರ ಇತ್ತೀಚೆಗೆ ಈಗಾಗಲೇ ಸೇವೆಯಲ್ಲಿರುವ ನೌಕರರ ವೇತನ ಪರಿಷ್ಕರಣೆ, ಭತ್ಯೆ ಮುಂತಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿತ್ತು. ಬುಧವಾರ ನಿವೃತ್ತಿ ವೇತನ ಸೌಲಭ್ಯ ಪರಿಷ್ಕರಣೆ ಆದೇಶ ಹೊರಡಿಸಿದೆ. ಅದರಂತೆಯೇ ವಿಶ್ರಾಂತಿ ನಿವೃತ್ತಿ ವೇತನ, ವಯೋ ನಿವೃತ್ತಿ ವೇತನ, ಅಶಕ್ತತಾ ನಿವೃತ್ತಿ ವೇತನ, ಪರಿಹಾರ ನಿವೃತ್ತಿ ವೇತನ ಮತ್ತು ಅನುಕಂಪ ಭತ್ಯೆಗಳ ಮಾಹೆಯಾನ ವೇತನ ಕನಿಷ್ಠ 8,500 ರೂ.ಗಳಿಗೆ ಹಾಗೂ ಗರಿಷ್ಠ ಮೊತ್ತ 75,300 ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ತಾತ್ಪೂರ್ತಿಕ (ಅಡ್‌ಹಾಕ್) ನಿವೃತ್ತಿ ವೇತನ ಪ್ರಮಾಣವು ಅತ್ಯಂತ ಅಸಾಧಾರಣ ಸಂದರ್ಭಗಳನ್ನು ಹೊರತು ಪಡಿಸಿ ಮಾಹೆಯಾನ 8,500 ರೂ.ಗಳಿಗೆ ಮೀರಬಾರದಾಗಿದೆ. ನಿವೃತ್ತಿ ಗ್ರಾಚುಟಿ ಮೊತ್ತ 1-4-2018ರಂದು ಅಥವಾ ನಂತರ ನಿವೃತ್ತಿ ಹೊಂದುವ ಸರ್ಕಾರಿ ನೌಕರರಿಗೆ ಗರಿಷ್ಠ ಮಿತಿ 20 ಲಕ್ಷ ರೂ ಆಗಿರಲಿದೆ. ಸರ್ಕಾರಿ ನೌಕರನು 1-4-2018ರಂದು ಮತ್ತು ನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದುವ, ನಿವೃತ್ತಿ ಹೊಂದುವ ಸರ್ಕಾರಿ ನೌಕರರಿಗೆ ಕುಟುಂಬ ನಿವೃತ್ತಿ ವೇತನ ಮಾಹೆಯಾನ ಕನಿಷ್ಠ 8,500 ಮತ್ತು ಗರಿಷ್ಠ 45,180 ರೂ.ಗಳ ಮಿತಿಗೆ ಒಳಪಟ್ಟಿರುತ್ತದೆ. ತಂದೆ ತಾಯಿ ಇಬ್ಬರು ಸರ್ಕಾರಿ ನೌಕರರಾಗಿದ್ದು, 1-4-2018ರ ನಂತರ ಅಥವಾ ನಂತರ ಮೃತರಾದ ವೇಳೆಯಲ್ಲಿ ಅಪ್ರಾಪ್ತ ಮಕ್ಕಳಿಗೆ ನೀಡುವ ಕುಟುಂಬ ಪಿಂಚಣಿ ಸಹ ಗರಿಷ್ಠ ಮಾಹೆಯಾನ 45,180 ರೂ.ಗಳಿಗೆ ಒಳಪಟ್ಟಿರುತ್ತದೆ.
Comments