ಅಪ್ರಾಪ್ತ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ – ಸುಗ್ರೀವಾಜ್ಞೆಗೆ ಸಿಕ್ತು ಕೇಂದ್ರದಿಂದ ಪೂರ್ಣ ಬೆಂಬಲ

ಅಪ್ರಾಪ್ತ ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.12 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರೆ ಗಲ್ಲು ಶಿಕ್ಷೆ ಹಾಗೂ ಇಂತಹ ಪ್ರಕರಣಗಳ ವಿಚಾರಣೆಯನ್ನು ವೇಗವಾಗಿ ನಡೆಯಲು ವಿಶೇಷ ಕ್ರಮವನ್ನು ಕೈಗೊಳ್ಳಲಾಗಿದೆ.
16 ಕೆಳಗಿನ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರೆ ಇದುವರೆಗೂ ಇದ್ದಂತಹ 10 ವರ್ಷಗಳ ಕನಿಷ್ಠ ಶಿಕ್ಷೆಯನ್ನು 20 ವರ್ಷಗಳಿಗೆ ಹೆಚ್ಚಿಸಲಾಗಿದೆ.ಹೆಚ್ಚಿನ ಪ್ರಮಾಣದ ಶಿಕ್ಷೆಯಾಗಿ ಜೀವವಧಿ ಶಿಕ್ಷೆ ವಿಧಿಸಬಹುದು ಎಂದು ತಿಳಿಸಿದ್ದಾರೆ. ಜಮ್ಮು ಕಾಶ್ಮೀರ ಕಥುವಾ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಆಶಿಫಾ ಮೇಲೆ ನಡೆದ ಅತ್ಯಾಚಾರದ ಬಳಿಕ ದೇಶದೆಲ್ಲೆಡೆ ಸಾಕಷ್ಟು ತೀವ್ರ ಪ್ರತಿಭಟನೆ ನಡೆದಿದ್ದವು. ಅಲ್ಲದೇ ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಮನೇಕಾ ಗಾಂಧಿ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದರು. ಪೋಸ್ಕೋ ಕಾಯ್ದೆ ಅಡಿ ಗಲ್ಲು ಶಿಕ್ಷೆಗೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.. ಅಲ್ಲದೇ ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಕೇಂದ್ರ ಸರ್ಕಾರ ಗಲ್ಲು ಶಿಕ್ಷೆ ವಿಧಿಸುವ ಕುರಿತ ಪತ್ರವನ್ನು ಸಲ್ಲಿಸಿತ್ತು. ಸದ್ಯ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ನೀಡಿರುವ ಈ ತಿದ್ದುಪಡಿ ಮಸೂದೆ ಮುಂದಿನ ಜುಲೈ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ ಎಂದು ಕಾನೂನು ಸಚಿವಾಲಯದ ಅಧಿಕಾರಿಗಳು ಈಗಾಗಲೇ ತಿಳಿಸಿದ್ದಾರೆ.
Comments