ವಿದ್ಯಾರ್ಥಿಗಳಿಗೆ ಪಬ್ಲಿಕ್ ವಾಯ್ಸ್ ಜಡ್ಜ್ ಮೆಂಟ್ ಸಂಘಟನೆಯಿಂದ ಉಚಿತ ಇಂಟರ್ ನೆಟ್

ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ಆಯೋಗ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮತದಾನದ ಪ್ರಮಾಣ ಹೆಚ್ಚಳಕ್ಕೆ ಹಮ್ಮಿಕೊಂಡಿದೆ. ಅದೇ ರೀತಿ ಹಲವು ಸಂಘಟನೆಗಳು ಕೂಡ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿವೆ.
ವೋಟ್ ಹಾಕುವ ವಿದ್ಯಾರ್ಥಿಗಳಿಗೆಲ್ಲಾ ಉಚಿತವಾಗಿ ಇಂಟರ್ ನೆಟ್ ಸೇವೆ ಹಾಗೂ ರಿಯಾಯಿತಿ ದರದಲ್ಲಿ ದಿನಸಿ ಸಾಮಗ್ರಿಗಳನ್ನು ನೀಡುವುದಾಗಿ ಬೆಂಗಳೂರಿನ ಸಂಘಟನೆಯೊಂದು ಘೋಷಿಸಿದೆ. ಯುವಕರಲ್ಲಿ ಮತದಾನದ ಜಾಗೃತಿಯನ್ನು ಮೂಡಿಸುವ ಉದ್ದೇಶ ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ರಾಜಾಜಿನಗರದ ಜನಪ್ರಿಯ ಪಬ್ಲಿಕ್ ವಾಯ್ಸ್ ಜಡ್ಜ್ ಮೆಂಟ್ ಸಂಘಟನೆ ಈ ಕಾರ್ಯಕ್ರಮ ಕೈಗೊಂಡಿದೆ. ನವರಂಗ್ ಚಿತ್ರಮಂದಿರದ ಬಳಿ ಇರುವ ಜನಪ್ರಿಯ ಬ್ರೌಸಿಂಗ್ ಸೆಂಟರ್ ಮತ್ತು ದಿನಸಿ ಅಂಗಡಿಯಲ್ಲಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಮತದಾನದ ದಿನದಂದು ಬೆರಳಿನ ಗುರುತಿಗೆ ಹಾಕುವ ಶಾಯಿಯನ್ನು ತೋರಿಸಿ ವಿದ್ಯಾರ್ಥಿಗಳು 25 ಪೈಸೆ ದರದಲ್ಲಿ ಜೆರಾಕ್ಸ್ ಮಾಡಿಸಿಕೊಳ್ಳಬಹುದಾಗಿದೆ. ಅಲ್ಲದೇ 1 ಗಂಟೆ ಉಚಿತವಾಗಿ ಇಂಟರ್ ನೆಟ್ ಸೇವೆಯನ್ನು ಪಡೆಯಬಹುದಾಗಿದೆ. ನಾಗರಿಕರಿಗೆ ಶೇ. 20 ರಿಂದ ಶೇ. 40 ರಷ್ಟು ರಿಯಾಯಿತಿ ದರದಲ್ಲಿ ದಿನಸಿ ಸಾಮಗ್ರಿಯನ್ನು ನೀಡಲಾಗುವುದು ಎಂದು ಸಂಘಟನೆಯ ಮುಖ್ಯಸ್ಥ ವಿಶ್ವೇಶ್ವರ ಶರ್ಮ ಅಯ್ಯರ್ ತಿಳಿಸಿದ್ದಾರೆ. ಇನ್ನೂ ಚುನಾವಣೆ ಹತ್ತಿರ ಬರುತ್ತಿದ್ದಂತೆ ಯಾವೆಲ್ಲ ರೀತಿಯ ಆಫರ್ ಗಳು ಬರುತ್ತವೋ ಗೊತ್ತಿಲ್ಲ.
Comments