ಬೆಂಗಳೂರಿನ ದೊಡ್ಡ ಆಲದ ಮರಕ್ಕೆ ಎಷ್ಟು ವರ್ಷ ಇತಿಹಾಸವಿದೆ ಅನ್ನೋದು ಗೊತ್ತಾ?

04 Apr 2018 12:58 PM | General
2129 Report

ಮಮತೆಯ ಗಾಳಿ ಬೀಸಿ, ಅಕ್ಕರೆಯ ಕರೆಯೋಲೆ ನೀಡುವ ಆಲದ ಮರ, ಹುಳಹುಪ್ಪಟೆ, ಹಕ್ಕಿ ಪಕ್ಷಿ, ಮಂಗಗಳಿಗೆ ತವರು ನೆಲೆಯ ಬೀಡು. ಅದೇಷ್ಟೊ ಬಿಸಿ ಗಾಳಿ ಉಂಡು, ರಪ ರಪ ಹೊಡೆಯುವ ಮಳೆಗೆ ಮೈಯೊಡ್ಡಿ ತಾಪವಾದರೂ, ಪರರ ಖುಷಿಯಲ್ಲೆ ಸಿಹಿ ಉಂಡ ಮರವೇ ಈ ಆಲದ ಮರ.

ಕಣ್ಣು ಹಾಯಿಸಿದಷ್ಟು ಕಾಣುವ ಹಚ್ಚ ಹಸಿರಿನ ಮರ, ಸಿಕ್ಕ ಜಾಗದಲ್ಲೆಲ್ಲಾ ಹರಡಿಕೊಂಡಿರುವ ಮರದ ಬೃಹತ್ ಆಕಾರ. ಯಾವುದು ಬೇರು ಯಾವುದು ರಂಬೆ, ಕೊಂಬೆ ಅನ್ನೊದು ಕೂಡ ತಿಳಿಯದಷ್ಟು ದೈತ್ಯಾಕಾರವಾಗಿ ಬೆಳೆದು ನಿಂತಿದೆ ದೊಡ್ಡ ಆಲದ ಮರ.ಹೌದು, ಒಂದು ದಿನ ಸಮಯವಿದ್ದರೆ ಸಾಕು ದೊಡ್ಡ ಆಲದ ಮರಕ್ಕೆ ಬೇಟಿ ನೀಡುವುದು ಸೂಕ್ತಕರ. ದೊಡ್ಡ ಆಲದ ಮರದ ಪ್ರವಾಸ ಪ್ರಕೃತಿಯ ವಿಸ್ಮಯವನ್ನು ಅನಾವರಣಗೊಳಿಸುತ್ತ ನಿಮ್ಮೆಲ್ಲ ಒತ್ತಡಗಳು, ದುಗುಡಗಳನ್ನು ಒಂದು ಕ್ಷಣದಲ್ಲಿ ಮರೆಸು ಬಿಡುತ್ತದೆ.

ದೊಡ್ಡ ಆಲದ ಮರದ ಮಹತ್ವದ ಬಗ್ಗೆ ಹೇಳುವುದಾದರೆ ಭಾರತದ ನಮ್ಮ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿರುವುದರಿಂದ ಆಲದ ಮರವನ್ನು ಪೂಜಿಸಲಾಗುತ್ತದೆ. ಆಲದ ಮರವೆಂದರೆ ಹಳ್ಳಿಗಾಡಿನ ಶಾಸ್ವಕೋಶ ಎಂಬ ಪೂಜ್ಯ ಭಾವನೆ ಇದೆ. ಅಶುದ್ಧ ಗಾಳಿಯನ್ನು ಶುದ್ಧ ಮಾಡುವುದರಲ್ಲಿ ಆಲದ ಮರದ ಪಾತ್ರ ಮಹತ್ವದು.

ಬೆಂಗಳೂರಿನಿಂದ 28 ಕಿಮೀಗಳಷ್ಟು ದೂರದಲ್ಲಿರುವ ರಾಜರಾಜೇಶ್ವರಿ ಡೆಂಟಲ್ ಕಾಲೇಜ್ ಪಕ್ಕದ ರಸ್ತೆಯಲ್ಲಿ ಕೆಲವು ಕಿಮೀ ಕ್ರಮಿಸಿದರೆ ಕೇತೋಹಳ್ಳಿ ಎಂಬ ಗ್ರಾಮಕ್ಕೆ ಒಳಪಡುವ ಈ ದೊಡ್ಡ ಆಲದ ಮರ ಕಣ್ಣಿಗೆ ಕಾಣುತ್ತದೆ. ಸರಿಸುಮಾರು 400 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಭಾರತದ ಪುರಾತನ ಮರಗಳಲ್ಲಿ ಮೊದಲನೆಯದು ತಿಮ್ಮಮ್ಮ ಮರಿಮನು ಆಲದ ಮರ ಆಂಧ್ರಪ್ರದೇಶದ ಅನಂತ್‍ಪುರ ಜಿಲ್ಲೆಯಲ್ಲಿದೆ, ಎರಡನೆಯದು ದ ಗ್ರೇಟ್ ಆಲದ ಮರ ಕೊಲ್ಕತ್ತದಲ್ಲಿದೆ. ಮೂರನೆಯದು ಆದ್ಯಾರ್ ಆಲದ ಮರ ಚೆನ್ನೈನ್ಲಲ್ಲಿದೆ. ಪ್ರಸ್ತುತ 4ನೇ ಸ್ಥಾನದಲ್ಲಿ ಬೆಂಗಳೂರಿನ ದೊಡ್ಡ ಆಲದ ಮರ ಇದೆ.

ಈ ಮರವೂ 95 ಅಡಿಗಳಷ್ಟು ಎತ್ತರವಾಗಿದ್ದು ಮೇಲ್ಭಾಗವು 120 ಮೀ ವ್ಯಾಪ್ತಿಯ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಏಕೈಕ ಆಲದ ಮರ ಸುಮಾರು 3 ಎಕರೆಗಳಷ್ಟು ಪ್ರದೇಶವನ್ನು ಬಾಚಿಕೊಂಡಿತ್ತು.. ಆಲದ ಮರ ದಿನದಿಂದ ದಿನಕ್ಕೆ ವಿಸ್ತರಿಸುತ್ತ ಹೋಗಿ ಈಗ 4 ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ. ಸಾವಿರಕ್ಕೂ ಹೆಚ್ಚು ವೈಮಾನಿಕ ಬೇರುಗಳನ್ನು ಈ ಬೃಹತ್ ವೃಕ್ಷ ಹೊಂದಿದೆ. ಸುಮಾರು ವರ್ಷಗಳ ಹಿಂದೆ ಮರದ ಮುಖ್ಯ ಬೇರು ನೈಸರ್ಗಿಕ ರೋಗ ಪೀಡಿತವಾಗಿ ನಾಶಗೊಂಡಿತು. ಅನೇಕ ರಂಬೆ ಕೊಂಬೆಗಳ ಆಧಾರ ಮತ್ತು ಫೋಷಣೆಯಲ್ಲಿ ಪ್ರಬಲವಾಗಿ ಮತ್ತು ಹೆಚ್ಚು ವೇಗವಾಗಿ ಬೆಳೆಯುತ್ತಿದೆ.

ಉದ್ಯಾನವನದ ಮರದ ಸುತ್ತಲು ಬ್ಯಾರಿಕೇಡ್ ಹಾಕಿದ್ದು ಬೆಳೆಯುತ್ತಿರುವ ಮರವನ್ನ ಹಿಡಿದಿಟ್ಟಂತೆ ಆಗಿದೆ. ಮರದ ಬಿಳಿಲುಗಳು ಸೀಮಿತ ಚೌಕಟ್ಟಿನ ಪಾರ್ಕ್ ಆವರಣವನ್ನು ದಾಟಿ ಹೋಗುತ್ತಿದೆ. ಅದನ್ನು ತೆಗೆದು ಮತ್ತು ಇಳೆ ಬಿಟ್ಟಿರುವ ಮರಕ್ಕೆ ಗೊಬ್ಬರ ಹಾಕಿ ಪೋಷಣೆ ಮಾಡಿದರೆ ನಾಲ್ಕನೇ ಸ್ಥಾನದಲ್ಲಿರುವ ಮರ ಒಂದನೇ ಸ್ಥಾನಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ.

ದೊಡ್ಡ ಆಲದ ಮರವು ಒಂದು ಅದ್ಭುತ ದೃಶ್ಯಕಾವ್ಯ. ಇಡೀ ಪ್ರದೇಶವನ್ನು ಒಳಗೊಂಡ ಏಕೈಕ ಮರ ಎಂಬುದನ್ನು ಗಮನಿಸ ಬೇಕಾಗುತ್ತದೆ. ಮರದ ಬಿಳಿಲುಗಳೆ ಬೇರುಗಳಾಗಿ, ಬೇರುಗಳೆ ಒಂದೊಂದು ಮರದಂತೆ ಬೆಳೆದು ನಿಂತಿರುವುದು ಹಸಿರಿನ ಸುಂದರ ನೋಟವನ್ನು ಕಣ್ಣಿಗೆ ನೀಡುತ್ತದೆ. ಮೊಳಕೆಯೊಡೆದು ಇನ್ನು ಮುಟ್ಟದೇ ಇರುವ ಅಸಂಖ್ಯಾತ ಸಣ್ಣ ಬೇರುಗಳು, ಬಾಗಿರುವ ರಂಬೆಕೊಂಬೆಗಳು ಮರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಸೌಂದರ್ಯವನ್ನು ಸವಿಯಲು ನೂರಾರು ಪ್ರವಾಸಿಗರು ಪ್ರತಿನಿತ್ಯ ಇಲ್ಲಿಗೆ ಆಗಮಿಸುತ್ತಾರೆ. ಶಾಂತ ಮತ್ತು ಪ್ರಶಾಂತ ವಾತಾವರಣದಲ್ಲಿ ಒಂದು ವಿಶ್ರಾಂತಿ ದಿನವನ್ನು ಸಂಪೂರ್ಣ ಏಕಾಂತತೆಯಲ್ಲಿ ಕಳೆಯುತ್ತಾರೆ. ಸ್ನೇಹಿತರು, ಮಕ್ಕಳು, ಫ್ಯಾಮಿಲಿಯವರು ಎಲ್ಲಾರು ಇಲ್ಲಿಗೆ ಬೇಟಿ ನೀಡಿ ಸುಮಧುರ ಸಮಯವನ್ನು ಕಳೆಯುತ್ತಾರೆ. ಮತ್ತು ಬಿಪಿ, ಶುಗರ್ ಇರುವವರು ಸೂರ್ಯೋದಯ ಮತ್ತು ಸೂರ್ಯಸ್ತ ಸಮಯದಲ್ಲಿ ವಾಯುವಿಹಾರ ಮಾಡುವವರಿಗೆ ದೊಡ್ಡ ಆಲದ ಮರ ಒಂದು ಅದ್ಭುತ ಸ್ಥಳ.

ಈ ಉದ್ಯಾನವನಕ್ಕೆ ಆಗಮಿಸುವ ಪ್ರವಾಸಿಗರಿಗೆ ಎಲ್ಲಾ ರೀತಿಯ ಅನುಕೂಲವನ್ನು ಪ್ರವಾಸೋಧ್ಯಮ ಮತ್ತು ತೋಟಗಾರಿಕೆ ಇಲಾಖೆ ಮಾಡಿದೆ. ಆವರಣದ ಒಳಗೆ ಹೋಡಾಡಲೂ ಸೂಕ್ತ ದಾರಿ, ಕುಳಿತು ವಿಶ್ರಮಿಸಲು ಕಲ್ಲಿನ ಬೆಂಚುಗಳು, ದಣಿದಾಗ ದಾಹ ನೀಗಿಸಲು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.ಆಲದ ಮರ ಒಂದು ಪ್ರೇಕ್ಷಣಿಯ ಸ್ಥಳ ಮಾತ್ರವಲ್ಲದೇ ನೂರಾರು ಪಕ್ಷಿ ಪ್ರಬೇಧಗಳು, ಜೇನು ಹುಳಗಳು ಮತ್ತು ನೂರಾರು ಕೋತಿಗಳಿಗೆ ಆಶ್ರಯ ನೀಡುತ್ತಿದೆ.

ಬಹು ಮುಖ್ಯವಾಗಿ ಇಲ್ಲಿನ ಸಸಿಗಳು, ಬೇರುಗಳು ಸ್ವಚ್ಛತೆ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ರಜದ ದಿನಗಳಲ್ಲಿ ಪ್ರವಾಸಿಗರು ಹೆಚ್ಚುತ್ತಿದ್ದು ತಿಂಡಿ ತಿನಿಸಿನ ಪ್ಲಾಸ್ಟಿಕ್ ಕವರ್, ನೀರಿನ್ ಬಾಟಲ್‍ಗಳು ಮುಂತಾದವುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರು ಮತ್ತು ಪರಿಸರ ಪ್ರೇಮಿಗಳು ಸರ್ಕಾರಕ್ಕೆ ಮತ್ತು ತೋಟಗಾರಿಗೆ ಇಲಾಖೆಗೆ ಮನವಿ ಇಟ್ಟಿದ್ದಾರೆ.ಇದಕ್ಕೆ ಸಂಬಂಧ ಪಟ್ಟ ತೋಟಗಾರಿಕೆ ಇಲಾಖೆಯಾಗಲಿ ಅಥವಾ ಅಧಿಕಾರಿಯಾಗಲಿ ಪಾರಂಪಾರಿಕ ತಾಣವಾಗಿರುವ ಆಲದ ಮರಕ್ಕೆ ರಕ್ಷಣೆ ಕೊಟ್ಟರೆ ಇದರ ಮಹತ್ವ ಮತ್ತಷ್ಟು ಹೆಚ್ಚುತ್ತದೆ. ಮತ್ತು  ದೇಶ ವಿದೇಶಿಗಳಿಂದ ಪ್ರವಾಸಿಗರು ಹೆಚ್ಚುತ್ತಾರೆ.

Edited By

Manjula M

Reported By

Shruthi G

Comments