ಮತದಾನದ ಮಹತ್ವ ಹೇಳಲು ಹೊರಟ ಭಟ್ರು

ರಾಜ್ಯದ ಜನತೆಗೆ ಮತದಾನದ ಮಹತ್ವ ಸಾರಲು ರಾಜ್ಯ ಚುನಾವಣಾ ಆಯೋಗದ ಮನವಿಯ ಕಾರಣಕ್ಕೆ ನಿರ್ದೇಶಕ ಯೋಗರಾಜ್ ಭಟ್ ಚುನಾವಣೆ ಕುರಿತೇ ವಿಶೇಷವಾದ ಒಂದು ಗೀತೆಯೊಂದನ್ನು ರಚಿಸಿದ್ದು, ಈಗ ಅದರ ಚಿತ್ರೀಕರಣ ಶುರುವಾಗಿದೆ.
ಪಾರದರ್ಶಕ ಮತದಾನವನ್ನು ಉತ್ತೇಜಿಸುವ ಸಂಬಂಧ ಈ ಗೀತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಯೋಗರಾಜ್ ಭಟ್ಟರ ಹಲವು ಗೀತೆಗಳ ಹಾಗೆಯೇ ಇದು ಕೂಡ ಜನಪ್ರಿಯವಾಗುವ ನಿರೀಕ್ಷೆ ಇದೆ. ಶುಕ್ರವಾರ ಈ ಗೀತೆಗೆ ಬೆಂಗಳೂರಿನ ಕಂಠೀರವ ಕ್ರಿಡಾಂಗಣ ಹಾಗೂ ವಿಧಾನಸೌಧದ ಮುಂಭಾಗ ಚಿತ್ರೀಕರಣ ನಡೆಯಿತು. ರಾಜ್ಯದ ನೂರಾರು ಸಾಂಸ್ಕೃತಿಕ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. 'ಈ ಚುನಾವಣೆ ಗೀತೆಯ ಪರಿಕಲ್ಪನೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರದ್ದು. ಅವರು ಚುನಾವಣೆಗೆ ಗೀತೆ ಸಿದ್ಧಪಡಿಸಲು ಉತ್ಸಾಹ ತೋರಿದರು.
ನಾವು ವಿಕಲಚೇತನರು, ಆದಿವಾಸಿಗಳು ಮತ್ತು ಯುವ ಮತದಾರರನ್ನು ಈ ಚುನಾವಣಾ ಗೀತೆಯ ಚಿತ್ರೀಕರಣಕ್ಕೆ ಬಳಸಿಕೊಳ್ಳುತ್ತಿದ್ದೇವೆ' ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದರು. ವಿಧಾನಸೌಧದ ಮುಂಭಾಗ ಚಿತ್ರೀಕರಣಕ್ಕೆ ಚಾಲನೆ ನೀಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, 'ಈ ಯೋಜನೆ ಕುರಿತು ನಾವು ಬಹಳ ಕಾಲ ಸಂಶೋಧನೆ ನಡೆಸಿದ್ದೇವೆ. ಈ ಗೀತೆ ಜಾಗೃತ ಮತ್ತು ನೈತಿಕ ಮತದಾನವನ್ನು ಉತ್ತೇಜಿಸಲಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ
ಮಾಡಲು ಪ್ರೇರೇಪಿಸುತ್ತದೆ' ಎಂದರು.
Comments