ಆರು ವರ್ಷಗಳ ಬಳಿಕ ತವರು ಸೇರಿದ ಮಲಾಲಾ..!!
ಪಾಕಿಸ್ತಾನದ ಬೆನಜಿರ್ ಭುಟ್ಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಲಾಲಾ ಮತ್ತು ಆಕೆಯ ಪೋಷಕರು ಆಗಮಿಸಿದ್ದು, ಅವರನ್ನು ಭಾರಿ ಭದ್ರತೆಯೊಂದಿಗೆ ಮನೆಗೆ ಕಳುಹಿಸಲಾಗಿದೆ. ಮಲಾಲಾ ಮತ್ತು ಆಕೆಯ ಕುಟುಂಬಸ್ಥರಿಗೆ ವ್ಯಾಪಕ ಭದ್ರತೆ ನೀಡಲಾಗಿದೆ.
ಮೂಲಭೂತವಾದಿ ತಾಲಿಬಾನಿ ಉಗ್ರರ ಕಪಿಮುಷ್ಟಿಯಲ್ಲಿರುವ ಸ್ವಾತ್ ಕಣಿವೆಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಿದ್ದ ಮಲಾಲಾ, ರಹಸ್ಯವಾಗಿ ಅಂತಾರಾಷ್ಟ್ರೀಯ ಸುದ್ದಿವಾಹಿನಿಗೆ ತನ್ನ ದೇಶದ ಮೂಲಭೂತವಾದಿ ಸಂಪ್ರದಾಯದ ಕುರಿತು ಲೇಖನಗಳನ್ನು ಬರೆದು ಕಳುಹಿಸುತ್ತಿದ್ದಳು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನ 11ನೇ ವಯಸ್ಸಿನಲ್ಲೇ ಹೋರಾಟ ನಡೆಸುತ್ತಿದ್ದ ಮಲಾಲಾ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ 2012ರಲ್ಲಿ ಸ್ವಾತ್ ಕಣಿವೆಯಲ್ಲಿ ಶಾಲೆಗೆ ಹೋಗುತ್ತಿದ್ದ ಆಕೆಯ ಮೇಲೆ ತಾಲಿಬಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು.
ಮಲಾಲಾಳ ತಲೆ ಮತ್ತು ದೇಹಕ್ಕೆ ಗುಂಡುಗಳು ಹೊಕ್ಕು ಆಕೆ ಬದುಕುವುದೇ ಅನುಮಾನವಾಗಿತ್ತು. ಪಾಕಿಸ್ತಾನದ ಆಸ್ಪತ್ರೆಯಲ್ಲಿ ಮಲಾಲಾಗೆ ಚಿಕಿತ್ಸೆ ಮುಂದುವರೆದಿತ್ತು. ಇದೇ ಹೊತ್ತಿನಲ್ಲಿ ಮಲಾಲಾ ಪರ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ವಲೆಯಲ್ಲಿ ಏರ್ ಲಿಫ್ಟ್ ಮೂಲಕ ಪಾಕಿಸ್ತಾನ ಸರ್ಕಾರ ಆಕೆಯನ್ನು ಲಂಡನ್ ಗೆ ರವಾನೆ ಮಾಡಿ ಅಲ್ಲಿ ಆಕೆಗೆ ಚಿಕಿತ್ಸಾ ವ್ಯವಸ್ಥೆ ಮಾಡಿತ್ತು. ಬಳಿಕ ಚೇತರಿಸಿಕೊಂಡಿದ್ದ ಮಲಾಲಾ ಲಂಡನ್ ನಲ್ಲೇ ತನ್ನ ಶಾಲಾ ವಿದ್ಯಾಭ್ಯಾಸ ಮುಗಿಸಿದ್ದು, ಘಟನೆ ನಡೆದ ಆರು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ವಾಪಸ್ ಆಗಿದ್ದಾಳೆ.
Comments