'ಕೈ - ಕಮಲ'ದ ದಾಳ ಉರುಳಿಸಲು ಷಡ್ಯಂತ್ರ ನಡೆಸಿರುವ ಜೆಡಿಎಸ್
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಧಿಕಾರ ಉಳಿಸಿಕೊಳ್ಳುವ ರಣತಂತ್ರ, ಬಿಜೆಪಿಯ ಮಿಷನ್-150ಗೆ ಪ್ರತಿಯಾಗಿ ಜೆಡಿಎಸ್ ತನ್ನದೇ ಆದ ಕಾರ್ಯತಂತ್ರ ರೂಪಿಸುತ್ತಿದೆ. ಪಂಚಸೂತ್ರಗಳ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಸದ್ದಿಲ್ಲದೇ ಸಿದ್ಧತೆ ನಡೆಸುತ್ತಿದ್ದಾರೆ.
ಹೌದು, ಉಭಯ ರಾಷ್ಟ್ರೀಯ ಪಕ್ಷಗಳ ರಾಜಕೀಯ ತಂತ್ರಗಾರಿಕೆಗೆ ಪ್ರತಿಯಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಒಂದೊಂದೇ ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದಾರೆ. ವಿನ್ನಿಂಗ್ ಸ್ಟ್ರಾಟರ್ಜಿ ರೂಪಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಜೆಡಿಎಸ್ ಪಂಚಸೂತ್ರಗಳನ್ನು ಸಿದ್ಧ ಮಾಡಿದೆ.
ವೋಟರ್ಸ್ ಇಂಟಲಿಜೆನ್ಸ್ ಸಾಫ್ಟ್‌ವೇರ್ :
ಇದು ಜೆಡಿಎಸ್‌ನ ಪ್ರಮುಖ ಅಸ್ತ್ರ. ವೋಟರ್ಸ್ ಇಂಟಲಿಜೆನ್ಸ್ ಸಾಫ್ಟ್‌ವೇರ್ ಮೊರೆ ಹೋಗಿರುವ ಜೆಡಿಎಸ್ ಚುನಾವಣೆಗೆ ಸಂಬಂಧಿಸಿದಂತೆ ಡಿಜಿಟಲ್ ಮಾಹಿತಿ ಸಂಗ್ರಹಿಸುತ್ತಿದೆ. ಇಂಟಲಿಜೆನ್ಸ್ ಸಾಫ್ಟ್‌ವೇರ್‌ನಲ್ಲಿ ಕಳೆದ 4 ವಿಧಾನಸಭಾ ಚುನಾವಣೆಗಳ ಫಲಿತಾಂಶದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರ್ಯಾರು ಅಭ್ಯರ್ಥಿಗಳಾಗಿದ್ದರು? ಜೆಡಿಎಸ್ ಅಭ್ಯರ್ಥಿಗೆ ಬಿದ್ದ ಮತಗಳೆಷ್ಟು? ಚುನಾವಣೆಯಿಂದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಹೆಚ್ಚಾದ ಮತಗಳ ಸಂಖ್ಯೆಯೆಷ್ಟು? ಯಾವ ಯಾವ ಕ್ಷೇತ್ರಗಳಲ್ಲಿ ಶಕ್ತಿಶಾಲಿಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪ್ರತ್ಯೇಕವಾಗಿ ಕಲೆಹಾಕಿ ವಿಶ್ಲೇಷಿಸಲಾಗುತ್ತದೆ. ಆ ಲೆಕ್ಕಾಚಾರದ ಮೇಲೆ ಚುನಾವಣಾ ತಂತ್ರಗಳನ್ನು ರೂಪಿಸಲಾಗುತ್ತದೆ. ಪ್ರತಿ ಬೂತ್ ಮಟ್ಟದಲ್ಲೂ ರಚಿಸಲ್ಪಡುವ ಜೆಡಿಎಸ್ ಕಾರ್ಯಕರ್ತರ ತಂಡ ಪ್ರತಿ ಮನೆ ಮನೆಗೆ ಹೋಗಿ ಜೆಡಿಎಸ್‌ಗೆ ಮತ ನೀಡಿ ಎಂದು ಮನವಿ ಮಾಡಬೇಕು. ಪ್ರತಿ ಮತದಾರನಿಗೆ ಈ ಬಾರಿ ಕುಮಾರಣ್ಣನಿಗೆ ಒಂದು ಅವಕಾಶ ನೀಡಿ ಎಂದು ಕೇಳಬೇಕು. ಆಗ ಮತದಾರರು ಏನು ಹೇಳ್ತಾರೋ ಆ ವಿಚಾರವನ್ನು ಪಕ್ಷದ ಕೇಂದ್ರ ಕಚೇರಿಗೆ ತಲುಪಿಸಬೇಕು. ಇದಕ್ಕಾಗಿ ಒಂದು ವಿಶಿಷ್ಟ ಆ್ಯಪ್ ರೆಡಿ ಮಾಡಲಾಗಿದ್ದು, ಎಲ್ಲಾ ಕಾರ್ಯಕರ್ತರು ಮೊಬೈಲ್ ಆ್ಯಪ್ ಮೂಲಕ ಮತದಾರರ ಅಭಿಪ್ರಾಯ ತಲುಪಿಸಬೇಕು ಹಾಗೂ ಅವರ ಮೊಬೈಲ್ ನಂಬರ್ ಕೂಡಾ ಆ್ಯಪ್ ಮೂಲಕ ಕಳಿಸಬೇಕು. ಹೀಗೆ ಸಂಗ್ರಹಗೊಂಡ ಅಭಿಪ್ರಾಯ ಹಾಗೂ ಮೊಬೈಲ್ ನಂಬರ್‌ಗಳು ವೋಟರ್ಸ್ ಇಂಟಲಿಜೆನ್ಸ್ ಸಾಫ್ಟ್‌ವೇರ್‌ಗೆ ಬಂದು ಸಂಗ್ರಹ ಆಗುತ್ತದೆ.
ವಾಟ್ಸಾಪ್ ಗ್ರೂಪ್ :
ಬೂತ್ ಮಟ್ಟದ ಕಾರ್ಯಕರ್ತರನ್ನೊಳಗೊಂಡು ರಾಜ್ಯ ಮಟ್ಟದವರೆಗೂ ಸುಮಾರು 25,000 ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಎಚ್ ಡಿಕೆ ಸಿಎಂ ಆದಾಗ ತಂದಿದ್ದ ಯೋಜನೆಗಳು, ಪ್ರಧಾನಿಯಾಗಿ ದೇವೇಗೌಡರು ಮಾಡಿದ ಕಾರ್ಯಗಳನ್ನು ವಾಟ್ಸಾಪ್‌ಗಳ ಮೂಲಕ ಜನರಿಗೆ ತಲುಪಿಸಲಾಗುತ್ತದೆ. ವಿದ್ಯಾರ್ಥಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವೈದ್ಯರು, ವಕೀಲರು ಸೇರಿದಂತೆ ಸ್ಥಳೀಯ ಪ್ರಮುಖ ಮುಖಂಡರನ್ನು ವಾಟ್ಸಾಪ್ ಗ್ರೂಪ್ ಗಳಿಗೆ ಆ್ಯಡ್ ಮಾಡಲಾಗುತ್ತೆ.
ಎಸ್.ಎಂ.ಎಸ್ ಮತ್ತು ವಾಯ್ಸ್ ಎಸ್.ಎಂ.ಎಸ್ :
ಜೆಡಿಎಸ್ ಪಕ್ಷಕ್ಕೆ ಈ ಬಾರಿ ಮತ ನೀಡಿ ಎಂದು ಕುಮಾರಸ್ವಾಮಿ ವಿನಂತಿ ಮಾಡಿರುವ ಸಂದೇಶಗಳನ್ನು ಮತದಾರರ ಮೊಬೈಲ್ ಗಳಿಗೆ ಕಳಿಸಲಾಗುತ್ತದೆ. ಆ ಮೂಲಕ ಮತದಾರರನ್ನು ಮುಟ್ಟುವ ಪ್ರಯತ್ನ ನಡೆಸಲಾಗುತ್ತದೆ.
ಟಾಕಿಂಗ್ ಓಟರ್ ಸ್ಲಿಪ್ :
ಈ ಬಾರಿ ಜೆಡಿಎಸ್‌ನ ಓಟರ್ ಸ್ಲಿಪ್ ಕೂಡಾ ಬಹಳ ವಿಭಿನ್ನವಾಗಿರುತ್ತದೆ. ಓಟರ್ ಸ್ಲಿಪ್ ವಿಭಿನ್ನ ರೀತಿಯಲ್ಲಿ ಪ್ರಿಂಟ್ ಮಾಡಿಸಲಾಗುತ್ತದೆ. ಸ್ಲಿಪ್‌ಗಳ ಮೇಲೆ ಕುಮಾರಸ್ವಾಮಿ ಮತ್ತು ದೇವೇಗೌಡರ ಸಾಧನೆಗಳ ಆಕರ್ಷಕ ವಾಕ್ಯಗಳಿರುತ್ತವೆ. ಇವು ಜೆಡಿಎಸ್ ಈ ಬಾರಿ ಅನುಸರಿಸಲು ಹೊರಟಿರುವ ಪಂಚಸೂತ್ರ ಫಾರ್ಮುಲಾ.
ಸ್ಕೈ ಬಲೂನ್ :
ವಿಧಾನಸಭಾ ಕ್ಷೇತ್ರಗಳ ಪ್ರಮುಖ ಗಲ್ಲಿಗಳು, ಆಟದ ಮೈದಾನಗಳಲ್ಲಿ ಎಚ್.ಡಿ ದೇವೇಗೌಡ, ಕುಮಾರಸ್ವಾಮಿಯವರ ಭಾವಚಿತ್ರವಿರುವ ಸ್ಕೈ ಬಲೂನ್ ಹಾರಿ ಬಿಡಲಾಗುತ್ತದೆ. ಈಗಾಗಲೇ ಜೆಡಿಎಸ್ ನ ಹಲವು ಸಮಾವೇಶ ಹಾಗೂ ಬೆಳವಣಿಗೆ ಕಂಡು ದಿಗ್ಬ್ರಮೆಗೊಂಡಿರುವ ರಾಷ್ಟ್ರೀಯ ಪಕ್ಷಗಳು, ಜೆಡಿಎಸ್ ರೂಪಿಸಿರುವ ಈ ಷಡ್ಯಂತ್ರಕ್ಕೆ ರಾಷ್ಟ್ರೀಯ ಪಕ್ಷಗಳು ಗುರಿಯಾಗಲಿದೆ. ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ.
Comments