ಅಡ್ಡ ಮತದಾನದ ಪ್ರಕರಣ : ಸ್ಪೀಕರ್ ಕೆ.ಬಿ.ಕೋಳಿವಾಡ ಗೆ ಜೆಡಿಎಸ್ ಮನವಿ

ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ದ ನೀಡಿದ್ದ ದೂರಿನ ಪ್ರಕರಣ ಇತ್ಯರ್ಥಗೊಳಿಸಬೇಕೆಂದು ಜೆಡಿಎಸ್ ಶಾಸಕರಾದ ಬಿ.ಬಿ.ನಿಂಗಯ್ಯ, ಸಿ.ಎನ್.ಬಾಲಕೃಷ್ಣ ಅವರು ಇಂದು ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ.
ಕಳೆದ ಬಾರಿ ನಡೆದ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಶಾಸಕರು ವಿಪ್ ಉಲ್ಲಂಘಿಸಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ದ ಮತದಾನ ಮಾಡಿದ್ದ ಶಾಸಕರನ್ನು ಅನರ್ಹಗೊಳಿಸಬೇಕೆಂದು ದೂರು ನೀಡಲಾಗಿತ್ತು. ಅದರಲ್ಲಿ ಶಾಸಕ ಕೆ.ಗೋಪಾಲಯ್ಯ ಅವರು ಜೆಡಿಎಸ್‍ಗೆ ಹಿಂದಿರುಗಿದ್ದರು.ಉಳಿದ ಜೆಡಿಎಸ್ ಬಂಡಾಯ ಏಳು ಶಾಸಕರ ವಿರುದ್ದ ವಿಚಾರಣೆ ನಡೆಸಲಾಗಿತ್ತಾದರೂ ಪ್ರಕರಣ ಇತ್ಯರ್ಥವಾಗಿರಲಿಲ್ಲ. ಈಗ ಪ್ರಕರಣವನ್ನು ಇತ್ಯರ್ಥ ಮಾಡಬೇಕೆಂದು ಈ ಹಿಂದೆ ದೂರು ನೀಡಿದ್ದ ಸಿ.ಎನ್.ಬಾಲಕೃಷ್ಣ ಹಾಗೂ ಬಿ.ಬಿ.ನಿಂಗಯ್ಯ ಅವರು ಸ್ಪೀಕರ್ ಅವರಿಗೆ ಮನವಿ ಮಾಡಲಿದ್ದಾರೆ. ಇದೇ 23ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು , ಜೆಡಿಎಸ್‍ನಿಂದ ಫಾರೂಕ್ ಅವರನ್ನು ಕಣಕ್ಕಿಳಿಸಲಾಗಿದೆ. ಜೆಡಿಎಸ್ ಬಂಡಾಯ ಶಾಸಕರ ವಿರುದ್ದ ಮುಂದಿನ ಕಾನೂನು ಹೋರಾಟ ನಡೆಸಲು ಸ್ಪೀಕರ್ ಅವರ ಮುಂದಿರುವ ಪ್ರಕರಣ ಇತ್ಯರ್ಥವಾಗಬೇಕಿದೆ. ಸ್ಪೀಕರ್ ಈ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸದಿದ್ದರೆ ಜೆಡಿಎಸ್ ಕಾನೂನು ಹೋರಾಟ ಮುಂದುವರೆಸುವ ಸಾಧ್ಯತೆ ಇದೆ.
Comments