ಸಿಎಂ ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟ ಜೆಡಿಎಸ್ ಮುಖಂಡ ಹೆಚ್.ವಿಶ್ವನಾಥ್

ಕಲ್ಲು ಕಟ್ಟಡಗಳನ್ನು ನಿರ್ಮಿಸಿದಾಕ್ಷಣ ಮೈಸೂರು ಮಹಾರಾಜರಿಗಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ದವರಾಗ್ತಾರಾ ಎಂದು ಜೆಡಿಎಸ್ ಮುಖಂಡ ಹೆಚ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಸಿ ಕಚೇರಿ, ಜಯದೇವ ಹೃದ್ರೋಗ ಆಸ್ಪತ್ರೆ ಕಟ್ಟಡಗಳು ಇನ್ನೂ ಪೂರ್ಣಗೊಂಡಿಲ್ಲ. ಆದರೂ ಇಷ್ಟು ತರಾತುರಿಯಲ್ಲಿ ಎಲ್ಲವನ್ನೂ ಉದ್ಘಾಟನೆ ಮಾಡುತ್ತಿರುವುದು ಕಂಡರೆ, ಸಿದ್ದರಾಮಯ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಇಲ್ಲ, ತಾವು ಮುಖ್ಯಮಂತ್ರಿಯೂ ಆಗಲ್ಲ ಎಂದು ಈಗಾಗಲೇ ತಿಳಿದಿರಬೇಕು ಎಂದು ವ್ಯಂಗ್ಯವಾಡಿದರು.
ಕೆ.ಆರ್.ಎಸ್. ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಯದೇವ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ತಮ್ಮನ್ನು ಮಹಾರಾಜರಿಗೆ ಹೋಲಿಸಿಕೊಂಡು ಮಾತನಾಡಿದ್ದಕ್ಕೆ ನಗರದ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಲು ಕಟ್ಟಡಗಳನ್ನು ನಿರ್ಮಿಸಿದ ತಕ್ಷಣ ಮಹಾರಾಜರಿಗೆ ತನ್ನನ್ನು ಹೋಲಿಸಿಕೊಳ್ಳುವುದು ಎಷ್ಟು ಸರಿ? ಇವರ ಕಾರ್ಯ ನೋಡಿ ಜನ ಮೆಚ್ಚಬೇಕೇ ಹೊರತು ಇವರೇ ಬೀಗುವುದಲ್ಲ ಎಂದು ಹರಿಹಾಯ್ದರು. ಐಎಎಸ್, ಐಪಿಎಸ್ ಅಧಿಕಾರಿಗಳಿಗೇ ಗೃಹಸಚಿವರು ಮತ್ತು ಮುಖ್ಯಮಂತ್ರಿ ಮೇಲೆ ನಂಬಿಕೆಯಿಲ್ಲ. ಐಪಿಎಸ್ ಅಸೋಸಿಯೇಶನ್ ಈ ರೀತಿ ಬಹಿರಂಗ ಪತ್ರ ಬರೆದಿರೋದು ಆಡಳಿತ ಇತಿಹಾಸದಲ್ಲಿ ಇದೇ ಮೊದಲು ಎಂದು ಜೆಡಿಎಸ್ ಮುಖಂಡ ಹೆಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ. ಐಪಿಎಸ್ ಅಸೋಸಿಯೇಶನ್ ರಾಜ್ಯ ಸರ್ಕಾರದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬರೆದಿರುವ ಬಹಿರಂಗ ಪತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪತ್ರವನ್ನು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ದೇಶದಲ್ಲಿ ಅತಿ ಹೆಚ್ಚು ಕ್ರೈಂ ನಡೆಯುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಜಾತಿ ವಿಚಾರಣೆ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳು ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Comments