ರೇಷನ್ ಕಾರ್ಡ್ ದುರ್ಬಳಕೆಯ ಬಗ್ಗೆ ಮಾಹಿತಿ ಕೊಟ್ಟು ಬಹುಮಾನ ಪಡೆಯಿರಿ..!!

ಇತ್ತೀಚಿಗೆ ಪಡಿತರ ಚೀಟಿ ದುರ್ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಒಬ್ಬರ ಹೆಸರಿನಲ್ಲಿ ಇನ್ನೊಬ್ಬರು ಪಡಿತರ ಚೀಟಿಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸತ್ತವರ ಹೆಸರಿನಲ್ಲೂ ಈ ಸೇವೆಯನ್ನು ಪಡೆದುಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿರುವವರನ್ನು ಪತ್ತೆ ಹಚ್ಚಲು ಆಹಾರಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ರವರು ಹೊಸ ಐಡಿಯಾ ಮಾಡಿದ್ದಾರೆ.
ಪಡಿತರ ಚೀಟಿ ದುರ್ಬಳಕೆಯಾಗಿರುವ ಬಗ್ಗೆ ಮಾಹಿತಿ ನೀಡಿದರೆ 400ರೂ. ಬಹುಮಾನ ಕೊಡುವುದಾಗಿ ಆಹಾರಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಘೋಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೆ ಬಹುಮಾನ ಸ್ಕೀಂ ಎಂದು ಹೆಸರಿಟ್ಟಿದ್ದು, 10 ದಿನಗಳೊಳಗೆ ಇದು ಜಾರಿಗೆ ಬರಲಿದೆ ಎಂದು ತಿಳಿಸಿದರು. ಯಾರೇ ಬಲಾಢ್ಯರಾಗಿರಲಿ ಪಡಿತರ ಚೀಟಿ ದುರ್ಬಳಕೆ ಮಾಡಿಕೊಂಡಿದ್ದರೆ ಅಂತಹವರ ಹೆಸರನ್ನು ತಮಗೆ ತಿಳಿಸಿದರೆ ಅವರಿಗೆ 400ರೂ. ಬಹುಮಾನ ನೀಡಲಾಗುತ್ತದೆ. ಅಲ್ಲದೆ, ಅವರ ಹೆಸರನ್ನುಗೌಪ್ಯವಾಗಿಡಲಾಗುತ್ತದೆ ಎಂದು ಹೇಳಿದರು.
ಆಹಾರ ಪದಾರ್ಥ ಅಕ್ರಮ ದಾಸ್ತಾನು ಮಾಡಿರುವ ಬಗ್ಗೆ ತಿಳಿಸಿದರೆ ದಾಸ್ತಾನಿನಲ್ಲಿ ಶೇ.20ರಷ್ಟು ಪದಾರ್ಥವನ್ನು ಮಾಹಿತಿ ನೀಡಿದವರಿಗೆ ಕೊಡಲಾಗುವುದು ಎಂದು ತಿಳಿಸಿದರು. ಪಡಿತರ ಚೀಟಿ ತಪಾಸಣೆ ಹಾಗೂ ಅಂಗಡಿಗಳ ಪರಿಶೀಲನೆ ನಡೆಸಲು ಐದು ಜನರ ಸದಸ್ಯರುಳ್ಳ ವಿಜಿಲೆನ್ಸ್ ಪಂಚಪೀಠ ಸಮಿತಿ ರಚಿಸಲಾಗುತ್ತದೆ. ಇದು ಒಂದು ವಾರದಲ್ಲಿ ಜಾರಿಗೆ ಬರಲಿದೆ. ನಂತರ ರಾಜ್ಯಾದ್ಯಂತ ಎಲ್ಲೆಡೆ ತಪಾಸಣೆ ಕಾರ್ಯ ಭರದಿಂದ ನಡೆಯಲಿದೆ ಎಂದು ವಿವರಿಸಿದರು.
Comments