ಚುನಾವಣಾ ಅಭ್ಯರ್ಥಿಗಳು ಕಡ್ಡಾಯವಾಗಿ ಈ ಅಂಶಗಳನ್ನು ಬಹಿರಂಗಪಡಿಸಬೇಕು : ಸುಪ್ರೀಂ
ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಆದಾಯದ ಮೂಲವನ್ನು ಬಹಿರಂಗಪಡಿಸಬೇಕು. ಅಷ್ಟೇ ಅಲ್ಲದೇ ಅಭ್ಯರ್ಥಿಗಳ ಹೆಂಡತಿ ಹಾಗೂ ಮಕ್ಕಳ ಆದಾಯ ಮೂಲವನ್ನೂ ಬಹಿರಂಗಪಡಿಸುಬೇಕೆಂದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.ನ್ಯಾ. ಜೆ ಚಲಮೇಶ್ವರ್ ನೇತೃತ್ವದ ಪೀಠ ಈ ಐತಿಹಾಸಿಕ ತೀರ್ಪು ನೀಡಿದ್ದು, ಅಭ್ಯರ್ಥಿಯು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತನ್ನ, ತನ್ನ ಹೆಂಡತಿಯ ಹಾಗೂ ಅವಲಂಬಿತರಾದ ಮಕ್ಕಳ ಆದಾಯ ಮೂಲವನ್ನ ಬಹಿರಂಗಪಡಿಸಬೇಕು ಎಂದಿದೆ.
ಅಭ್ಯರ್ಥಿಗಳ ಆದಾಯ ಮೂಲದ ಮಾಹಿತಿಗಾಗಿ ನಾಮಪತ್ರ ಅರ್ಜಿಯಲ್ಲಿ ಕಾಲಮ್ ಸೇರಿಸಬೇಕು ಎಂದು ಮನವಿ ಮಾಡಿ ಸರ್ಕಾರೇತರ ಸಂಸ್ಥೆ ಲೋಕ್ ಪ್ರಹಾರಿ ಅರ್ಜಿ ಸಲ್ಲಿಸಿತ್ತು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ತನ್ನ ಹಾಗೂ ಹೆಂಡತಿ, ಮಕ್ಕಳ ಆಸ್ತಿಯನ್ನ ಬಹಿರಂಗಪಡಿಸಿರುತ್ತಾರೆ. ಆದರೆ ಅವರು ಆದಾಯದ ಮೂಲವನ್ನ ಬಹಿರಂಗಪಡಿಸುತ್ತಿಲ್ಲ. ಆದಾಯ ಮೂಲ ಬಹಿರಂಗಪಡಿಸಿದರೆ ಅದು ಕಾನೂನು ಬದ್ಧವಾದ ಗಳಿಕೆಯೂ ಇಲ್ಲವೋ ಎಂಬುದು ಜನರಿಗೆ ತಿಳಿಯುತ್ತದೆ ಎಂದು ಅರ್ಜಿದಾರರು ಹೇಳಿದ್ದರು.ಆಸ್ತಿಯಲ್ಲಿ ಗಣನೀಯ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ 7 ಲೋಕಸಭಾ ಸಂಸದರು ಹಾಗೂ 98 ರಾಜ್ಯ ಶಾಸಕರನ್ನ ತನಿಖೆ ಮಾಡುತ್ತಿರುವುದಾಗಿ ಕೇಂದ್ರಿಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಸುಪ್ರೀಂ ಕೋರ್ಟ್‍ಗೆ ಈ ಹಿಂದೆ ಹೇಳಿತ್ತು. ಆಸ್ತಿಯ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಬಳಿಕ, ಲೋಕಸಭಾ ಸಂಸದರ ಆಸ್ತಿಯಲ್ಲಿ ಭಾರೀ ಏರಿಕೆ ಹಾಗೂ ಶಾಸಕರ ಆಸ್ತಿಯಲ್ಲಿ ಗಣನೀಯ ಏರಿಕೆಯಾಗಿರುವುದು ಕಂಡುಬಂದಿದೆ ಎಂದು ತಿಳಿಸಿತ್ತು.
26 ಲೋಕಸಭಾ ಸಂಸದರು, 11 ರಾಜ್ಯಸಭಾ ಸದಸ್ಯರು ಹಾಗೂ 257 ಶಾಸಕರ ಆಸ್ತಿಯಲ್ಲಿ ಚುನಾವಣಾ ಅಫಿಡವಿಡ್‍ನಲ್ಲಿ ಇರುವುದಕ್ಕಿಂತ ಗಣನೀಯ ಏರಿಕೆಯಾಗಿದೆ ಎಂದು ಲಕ್ನೋ ಮೂಲದ ಎನ್‍ಜಿಓ ಲೋಕ್ ಪ್ರಹಾರಿ ಆರೋಪ ಮಾಡಿದ ಬಳಿಕ ಪ್ರಾಥಮಿಕ ತನಿಖೆ ನಡೆಸಲಾಗಿತ್ತು. ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ಇನ್ನೂ 9 ಲೋಕಸಭಾ ಸಂಸದರು, 11 ರಾಜ್ಯಸಭಾ ಸಂಸದರು ಹಾಗೂ 42 ಶಾಸಕರ ಆಸ್ತಿ ಪರಿಶೀಲನೆ ನಡೆಯುತ್ತಿದೆ ಎಂದು ಸಿಬಿಡಿಟಿ ಹೇಳಿತ್ತು.ಈಗಿರುವ ಕಾನೂನಿನ ಪ್ರಕಾರ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ತನ್ನ, ತನ್ನ ಹೆಂಡತಿಯ ಹಾಗೂ ಮೂವರು ಅವಲಂಬಿತರ ಸ್ವತ್ತು, ಬಾಧ್ಯತೆಗಳನ್ನ ಬಹಿರಂಗಪಡಿಸಬೇಕು. ಆದ್ರೆ ಆದಾಯದ ಮೂಲವನ್ನು ಬಹಿರಂಗ ಪಡಿಸಬೇಕೆಂಬ ನಿಯಮ ಇರಲಿಲ್ಲ.ರಾಜಕಾರಣಿಗಳು ನಾಮಪತ್ರ ಸಲ್ಲಿಕೆ ವೇಳೆ ತೋರಿಸುವ ಆಸ್ತಿಗಿಂತ ನಂತರದಲ್ಲಿ ಸುಮಾರು 500% ನಷ್ಟು ಏರಿಕೆಯ ಬಗ್ಗೆ ಸರ್ಕಾರ ಯಾಕೆ ತನಿಖೆ ನಡೆಸಿಲ್ಲವೆಂದು ಅರ್ಜಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಸರ್ಕಾರವನ್ನ ಪ್ರಶ್ನಿಸಿತ್ತು.ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಹಿನ್ನೆಲೆಯಲ್ಲಿ ಅಭ್ರ್ಯಥಿಗಳು ಹೆಂಡತಿ ಹಾಗೂ ಅವಲಂಬಿತರದ್ದು ಸೇರಿದಂತೆ ತನ್ನ ಆದಾಯದ ಮೂಲವನ್ನ ಬಹಿರಂಗಪಡಿಸುವುದನ್ನ ಕಡ್ಡಾಯಗೊಳಿಸಬೇಕು ಎಂದು ಜನವರಿಯಲ್ಲಿ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‍ಗೆ ಹೇಳಿತ್ತು.
Comments