ಗಿನ್ನಿಸ್ ದಾಖಲೆಗೆ ಸಜ್ಜಾಗುತಿರುವ ‘ಆರ್ಯವೈಶ್ಯ ಸಮಾವೇಶ’

ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ವತಿಯಿಂದ ಫೆ.18ಕ್ಕೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ‘ಆರ್ಯವೈಶ್ಯ ಜನಾಂಗದ ರಾಜ್ಯ ಮಟ್ಟದ ಬೃಹತ್ ಜಾಗೃತಿ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 10.30ಕ್ಕೆ ಸಮಾವೇಶ ಆರಂಭವಾಗಲಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಹಾಗೂ ಆರ್ಯವೈಶ್ಯ ಅಭಿವೃದ್ಧಿ ನಿಗಮ ರಚಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ಸಮಾವೇಶದ ಸಾರಥ್ಯ ಹೊತ್ತಿರುವ ವಿಧಾನ ಪರಿಷತ್ ಸದಸ್ಯರೂ ಆದ ಮಹಾಮಂಡಳಿಯ ರಾಜ್ಯಾಧ್ಯಕ್ಷ ಡಾ.ಟಿ.ಎ.ಶರವಣ ತಿಳಿಸಿದ್ದಾರೆ.
'ನನ್ನ ನಡೆ ಸಮಾಜದ ಕಡೆ’ ಘೋಷವಾಕ್ಯದಡಿ ಸಮಾವೇಶ ನಡೆಯಲಿದ್ದು, ನಾಡಿನೆಲ್ಲೆಡೆಯಿಂದ ಆರ್ಯವೈಶ್ಯ ಸಮಾಜದ ಲಕ್ಷಾಂತರ ಬಾಂಧವರು ಪಾಲ್ಗೊಳ್ಳಲಿದ್ದಾರೆ. ಈ ಬೃಹತ್ ಸಮಾವೇಶದಲ್ಲಿ ಸಮುದಾಯದ ರಾಜ್ಯ ಮಟ್ಟದ ಹಣಕಾಸು ಸಂಸ್ಥೆ ಸ್ಥಾಪನೆಯ ಘೋಷಣೆ ಮಾಡಲಾಗುವುದು. ಸಮುದಾಯದ ರಾಜ್ಯಮಟ್ಟದ ಮಾಸಿಕ ಪತ್ರಿಕೆ ಬಿಡುಗಡೆ, ‘ಕರುಣಾಮಯಿ’ ಎಂಬ ಅಂಗವಿಕಲರ ಮಾಸಾಶನ ಕಾರ್ಯಕ್ರಮ ಉದ್ಘಾಟನೆ, ಮಹಾಮಂಡಳಿಯ ನೇತೃತ್ವದಲ್ಲಿ ನಮ್ಮ ಸಮಾಜಕ್ಕೋಸ್ಕರ ತಿರುಪತಿ, ಶಿರಡಿ, ಕುಕ್ಕೆಸುಬ್ರಹ್ಮಣ್ಯ, ಕಾಶಿ ಮುಂತಾದ ಪುಣ್ಯಕ್ಷೇತ್ರಗಳಲ್ಲಿ ವಿಶ್ರಾಂತಿ ಗೃಹ, ಅನ್ನಛತ್ರಗಳ ನಿರ್ಮಿಸುವುದು ಸೇರಿದಂತೆ ಅನೇಕ ಮಹತ್ವದ ಯೋಜನೆಗಳ ಘೋಷಣೆ, ಚಾಲನೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಸಮಾವೇಶದಲ್ಲಿ 15 ಸಾವಿರ ಸಮವಸ್ತ್ರಧಾರಿಗಳಿಂದ 3 ವಾಸವಿ ಗೀತೆಗಳ ಹಾಡಿಸಿ ಗಿನ್ನಿಸ್ ದಾಖಲೆ ನಿರ್ಮಿಸಲು ಸಿದ್ಧತೆ ನಡೆದಿದೆ. ಅಲ್ಲದೆ, ಹಂಪಿ ವಿರೂಪಾಕ್ಷ ದೇವಸ್ಥಾನದಿಂದ ಫೆ.2ರಂದು ಹೊರಟಿರುವ ಯುವ ಶಕ್ತಿ ರಥ 16 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಪಾದಯಾತ್ರೆ ಮುಗಿಸಿ ಫೆ.17ರ ಸಂಜೆ ಅರಮನೆ ಮೈದಾನದ ಸಮಾವೇಶ ಸ್ಥಳ ಪ್ರವೇಶಿಸಲಿದೆ. ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಆಗಮಿಸಬೇಕೆಂದು ಶರವಣ ಕೋರಿದ್ದಾರೆ.
Comments