ಕೆಎಸ್ ಆರ್ ಟಿಸಿ ಪ್ರಯಾಣಿಕರಿಗೆ ಫ್ರೀ ವೈ ಫೈ..!
ಸದ್ಯಕ್ಕೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ವಿಭಾಗಗಳಲ್ಲಿ ಇದು ಪ್ರಾಯೋಗಿಕವಾಗಿ ಆರಂಭವಾಗಲಿದ್ದು , ಪ್ರಯಾಣಿಕರಿಗೆ ಉಚಿತವಾಗಿ ವೈ ಫೈ ಸೌಲಭ್ಯ ಸಿಗಲಿದೆ. ಕೇವಲ ಹವಾ ನಿಯಂತ್ರಿತ (ಎಸಿ) , ವೋಲ್ವೋ ಲಕ್ಸುರಿ ಬಸ್ಗಳಲ್ಲದೆ ಸಾಮಾನ್ಯ ಬಸ್ಗಳಿಗೂ ವೈ ಫೈ ಸೇವೆ ಉಚಿತವಾಗಿ ಪ್ರಯಾಣಿಕರಿಗೆ ಸಿಗಲಿದೆ. ಮಾರ್ಚ್ ತಿಂಗಳೊಳಗೆ ಸುಮಾರು 8,800 ಬಸ್ಗಳಿಗೆ ವೈ ಫೈ ಅಳವಡಿಸಲು ಕೆಎಸ್ಆರ್ಟಿಸಿ ಪೂನಾ ಮೂಲದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದೆ.
ಈಗಾಗಲೇ ಈ ಸಂಸ್ಥೆಯ ಅಧಿಕಾರಿಗಳು ಬೆಂಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ವಿಭಾಗಗಳಲ್ಲಿ ಸಂಚರಿಸುವ ಕೆಲವು ಬಸ್‍ಗಳಿಗೆ ಮಾತ್ರ ವೈ ಫೈ ಸೌಲಭ್ಯವನ್ನು ಅಳವಡಿಸಿದ್ದಾರೆ. ನಗರಗಳಿಂದ ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸುವ ಬಸ್‍ಗಳಲ್ಲಿ ಇದು ಅಳವಡಿಕೆಯಾಗಿದ್ದು , ಇದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ಬಸ್‍ಗಳಿಗೆ ಅಳವಡಿಸಲಿದ್ದೇವೆ ಎಂದು ಕೆಎಸ್‍ಆರ್‍ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 24 ವಿಭಾಗಗಳಲ್ಲಿ ಬಸ್‍ಗಳಿಗೆ ವೈ ಫೈ ಹಾಕಲಾಗಿದೆ. ಇದರಿಂದ ಪ್ರಯಾಣಿಕರು ಸಂತೃಪ್ತರಾಗಿದ್ದು , ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ಈಶಾನ್ಯ, ವಾಯುವ್ಯ, ಆಗ್ನೇಯ ಮತ್ತು ನೈಋತ್ಯ ವಿಭಾಗಗಳಿಗೂ ಅಳವಡಿಸಲು ಇಲಾಖೆ ಚಿಂತನೆ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.
ನಾವು ಆದಾಯವನ್ನಷ್ಟೇ ಗುರಿಯಾಗಿಟ್ಟುಕೊಂಡು ಪ್ರಯಾಣಿಕರನ್ನು ಸೆಳೆಯುವ ಕಾರಣಕ್ಕಾಗಿ ಈ ವ್ಯವಸ್ಥೆಯನ್ನು ಕಲ್ಪಿಸುತ್ತಿಲ್ಲ. ಪ್ರಯಾಣಿಕರಿಗೆ ಸರ್ಕಾರಿ ಬಸ್‍ಗಳಲ್ಲಿಯೂ ಇಂತಹ ಸೌಲಭ್ಯ ಇದೆ ಎಂಬುದು ತಿಳಿಯಬೇಕು. ಖಾಸಗಿ ಬಸ್‍ಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ನಾವು ಕೆಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಮೂರು ವಿಭಾಗಗಳಲ್ಲಿ ಮಾರ್ಚ್ ತಿಂಗಳದ ಅಂತ್ಯದೊಳಗೆ ವೈ ಫೈ ಅಳವಡಿಕೆಯಾಗಲಿದೆ. ಆರ್ಥಿಕ ನಿರ್ವಹಣೆ ನೋಡಿಕೊಂಡು ಬೇರೆ ವಿಭಾಗಗಳಲ್ಲಿ ಅನುಷ್ಠಾನ ಮಾಡುವುದಾಗಿ ತಿಳಿಸಿದ್ದಾರೆ. ಉತ್ತಮ ಪ್ರತಿಕ್ರಿಯೆ: ಸರ್ಕಾರಿ ಬಸ್‍ಗಳಲ್ಲಿ ಉಚಿತ ವೈ ಫೈ ಸೌಲಭ್ಯ ಸಿಗುತ್ತಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಈ ಬಸ್‍ಗಳಿಗೆ ಬರುವ ಪ್ರಯಾಣಿಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೆಡೆ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಾಗೂ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯನ್ನು ಲಾಭದತ್ತ ಸರಿದೂಗಿಸಲು ಸ ರ್ಕಾರ ಕೈಗೊಂಡಿರುವ ಈ ಯೋಜನೆ ಯಶಸ್ವಿಯಾಗುವತ್ತ ಹೆಜ್ಜೆ ಇಟ್ಟಿದೆ.
Comments